ADVERTISEMENT

ರಾಮನಗರ: ರೇಷ್ಮೆಗೂಡು ಧಾರಣೆ ಹೆಚ್ಚಳ

ಬೇಸಿಗೆ ಬಿಸಿಲು, ತೊಂಡೆ ರೋಗದಿಂದ ತಗ್ಗಿದ ಉತ್ಪಾದನೆ

ಓದೇಶ ಸಕಲೇಶಪುರ
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
<div class="paragraphs"><p>ರಾಮನಗರ ರೇಷ್ಮೆ ಮಾರುಕಟ್ಟೆ</p></div>

ರಾಮನಗರ ರೇಷ್ಮೆ ಮಾರುಕಟ್ಟೆ

   

ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ರೇಷ್ಮೆಗೂಡು ಧಾರಣೆ ಹೆಚ್ಚಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.

ಮತ್ತೊಂದೆಡೆ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಧಾರಣೆ ಏರುಗತಿಯಲ್ಲಿದ್ದಾಗ ಗೂಡಿನ ಉತ್ಪಾದನೆ ತಗ್ಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ADVERTISEMENT

ಮಾರುಕಟ್ಟೆಯಲ್ಲಿ ಸೋಮವಾರ ಮಿಶ್ರತಳಿ (ಸಿ.ಬಿ) ರೇಷ್ಮೆಗೂಡು ಪ್ರತಿ ಕೆ.ಜಿ.ಗೆ ಕನಿಷ್ಠ ₹450ರಿಂದ ಗರಿಷ್ಠ ₹678ರಂತೆ ಸರಾಸರಿ ₹614 ದರಕ್ಕೆ ಮಾರಾಟವಾಗಿದೆ. ಉತ್ತಮ ಗುಣಮಟ್ಟದ ಬೈವೊಲ್ಟಿನ್ (ಬಿ.ವಿ) ಗೂಡು ಕನಿಷ್ಠ ₹286ರಿಂದ ಗರಿಷ್ಠ ₹825ರಂತೆ ಸರಾಸರಿ ₹724 ದರಕ್ಕೆ ಮಾರಾಟವಾಗಿದೆ. ಮಾರುಕಟ್ಟೆಗೆ ಮಿಶ್ರತಳಿ ಗೂಡು 147 ಲಾಟು (7,552.480 ಕೆ.ಜಿ) ಹಾಗೂ ಬಿ.ವಿ ಗೂಡು 388 ಲಾಟು (33,374.570 ಕೆ.ಜಿ) ಆವಕವಾಗಿದೆ.

ರೇಷ್ಮೆಗೂಡಿಗೆ ಇಲ್ಲಿನ ಮಾರುಕಟ್ಟೆಯು ರಾಜ್ಯದಲ್ಲೇ ಪ್ರಮುಖವಾದುದು. ರಾಜ್ಯದ ವಿವಿಧ ಭಾಗಗಳ ರೈತರಷ್ಟೇ ಅಲ್ಲದೆ ಪಕ್ಕದ ತಮಿಳನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ರೈತರೂ ಇಲ್ಲಿನ ಮಾರುಕಟ್ಟೆಗೆ ಗೂಡು ತಂದು ಮಾರಾಟ ಮಾಡುತ್ತಾರೆ. ಗೂಡು ಖರೀದಿಸುವ ರೀಲರ್ಸ್‌ಗಳು
ಸ್ಥಳೀಯವಾಗಷ್ಟೇ ಅಲ್ಲದೆ ದೇಶ–ವಿದೇಶಗಳಿಗೆ ಮಾರಾಟ ಮಾಡುತ್ತಾರೆ.

ಹೆಚ್ಚಿದ ಬಿಸಿಲು: ‘ಹವಾಮಾನ ವೈಪರೀತ್ಯದ ಕಾರಣಕ್ಕೆ ಬೆಳೆ ಉತ್ಪಾದನೆ ಕುಸಿತವಾಗಿದೆ. ಬೇಸಿಗೆ ಕಾರಣಕ್ಕೆ ದಿನದಿಂದ ದಿನಕ್ಕೆ ಬಿಸಿಲು ಝಳ ಹೆಚ್ಚಾಗುತ್ತಿದ್ದು ಉಷ್ಣಾಂಶವೂ ಏರಿಕೆಯಾಗುತ್ತಿದೆ. ಜೊತೆಗೆ ಬೆಳೆಯಲ್ಲಿ ಹಾಲು ತೊಂಡೆ ರೋಗ ಕಾಣಿಸಿಕೊಳ್ಳುತ್ತಿದೆ’ ಎಂದು ರಾಮನಗರ ಜಿಲ್ಲಾ ರೇಷ್ಮೆ
ಬೆಳೆಗಾರರ ಸಂಘದ ಅಧ್ಯಕ್ಷ ಕೆ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರಗಳಲ್ಲಿ ಗುಣಮಟ್ಟ ಕುಸಿಯುತ್ತಿದೆ. ಮುಂಚೆ ಇದೂ ಸಹ ರೇಷ್ಮೆ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ಈ ಮೊದಲು ಮಿಶ್ರತಳಿ ಗೂಡು 10 ಟನ್‌ಗೂ ಹೆಚ್ಚು ಮಾರುಕಟ್ಟೆಗೆ ಬರುತ್ತಿತ್ತು. ಬಿ.ವಿ ಗರಿಷ್ಠ 50 ಟನ್‌ ಇರುತ್ತಿತ್ತು. ಇದೀಗ ಎರಡರ ಉತ್ಪಾದನೆಯೂ ಕುಸಿತವಾಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು’
ಎಂದರು.

‘ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಚೆನ್ನಾಗಿದೆ. ಬೆಳೆಗಳಲ್ಲಿ ಕಾಣಿಸಿಕೊಂಡಿದ್ದ ರೋಗಗಳು ನಿಯಂತ್ರಣಕ್ಕೆ ಬಂದಿದ್ದು, ಇಲಾಖೆಯೂ ಅಗತ್ಯ–ಸಲಹೆ ಸೂಚನೆಗಳನ್ನು ಬೆಳೆಗಾರರಿಗೆ ನೀಡುತ್ತಿದೆ. ರೇಷ್ಮೆಗೂಡು ಧಾರಣೆ ಹೆಚ್ಚಳವಾಗಿರುವುದರಿಂದ ರೈತರ ಆದಾಯವೂ ಹೆಚ್ಚಿದೆ’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಸವರಾಜ ಹೇಳಿದ್ದಾರೆ.

ಮಾರುಕಟ್ಟೆಗೆ ಬರುವ ಲಾಟು ಇಳಿಕೆ

ಈ ಮೊದಲು ಮಾರುಕಟ್ಟೆಗೆ ಸಿ.ಬಿ ಮತ್ತು ಬಿ.ವಿ ರೇಷ್ಮೆಗೂಡು ಎರಡೂ ಸೇರಿ ಕನಿಷ್ಠ 600 ಲಾಟು ಬರುತ್ತಿತ್ತು. ಒಂದೂವರೆ ತಿಂಗಳಿಂದ ಹಂತ ಹಂತವಾಗಿ ಕಡಿಮೆಯಾಗಿ ಇದೀಗ 450–500 ಲಾಟಿಗೆ ಇಳಿಕೆಯಾಗಿದೆ. ಬೇಸಿಗೆಯಲ್ಲಾಗುವ ಹವಾಮಾನ ವೈಪರೀತ್ಯ ಹಾಗೂ ರೋಗಗಳ ಕಾರಣಕ್ಕೂ ಉತ್ಪಾದನೆಯಲ್ಲಿ ಈ ರೀತಿ ಕುಸಿತವಾಗುವುದುಂಟು ಎನ್ನುತ್ತಾರೆ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯ ಅಧಿಕಾರಿಗಳು.

‘ಕೇಂದ್ರ ರೇಷ್ಮೆ ಮಂಡಳಿಯಿಂದ ರೈತರಿಗೆ ಶೇ 15ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ 5ರಷ್ಟು ಮೊಟ್ಟೆ ಕೊಡುತ್ತಾರೆ. ಇವೆರಡರ ಗುಣಮಟ್ಟ ಚೆನ್ನಾಗಿರುತ್ತದೆ. ಆದರೆ, ಸ್ಥಳೀಯ ಚಾಕಾಣಿಕೆ ಕೇಂದ್ರದಿಂದ ರೈತರು ಖರೀದಿಸುವ ಮೊಟ್ಟೆಗಳು ಅಷ್ಟಾಗಿ ಗುಣಮಟ್ಟದಿಂದ ಕೂಡಿರುವುದಿಲ್ಲ. ಇಲ್ಲಿ ಮೊಟ್ಟೆ ಖರೀದಿಸುವ ರೈತರು ಸತತ ನಷ್ಟ ಅನುಭವಿಸಿದ ಬಳಿಕ ಉತ್ಪಾದನೆಯನ್ನೇ ನಿಲ್ಲಿಸುತ್ತಿದ್ದಾರೆ. ಇದರೊಂದಿಗೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗವೂ ಉತ್ಪಾದನೆ ಕುಸಿತಕ್ಕೆ ಕಾರಣ. ಜಿಲ್ಲೆಯಲ್ಲಿ 27 ಸಾವಿರ ರೇಷ್ಮೆ ಬೆಳೆಗಾರರಿದ್ದು, ಅವರಿಗೆ ಬೆಳೆ ಸಂರಕ್ಷಣೆ ಹಾಗೂ ಗುಣಮಟ್ಟ ಕುರಿತು ಅಧಿಕಾರಿಗಳು ಸೂಕ್ತ ಸಲಹೆ–ಸೂಚನೆ ನೀಡಿ ನಿಗಾ ವಹಿಸಬೇಕು’ ಎಂದು ರಾಮನಗರ ಜಿಲ್ಲಾ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರ್ವೇಜ್ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೂವರೆ ತಿಂಗಳಿಂದ ಮಾರುಕಟ್ಟೆಗೆ ಬರುತ್ತಿರುವ ಸಿ.ಬಿ, ಬಿ.ವಿ ರೇಷ್ಮೆಗೂಡು 450ರಿಂದ 500 ಲಾಟು ದಾಟುತ್ತಿಲ್ಲ. ಹಿಪ್ಪುನೇರಳೆ ಸೊಪ್ಪಿನ ಇಳುವರಿಯೂ ತಗ್ಗಿದೆ.
–ಭೀಮಪ್ಪ, ಉಪ ನಿರ್ದೇಶಕ, ರೇಷ್ಮೆಗೂಡು ಮಾರುಕಟ್ಟೆ, ರಾಮನಗರ

ರೇಷ್ಮೆಗೆ ಮಾರುಕಟ್ಟೆಯೇ ಇಲ್ಲ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಪ್ರಸ್ತುತ 368 ರೇಷ್ಮೆ ಬೆಳೆಗಾರರು 998 ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ರೈತ ಉತ್ಪಾದಿಸಿದ ರೇಷ್ಮೆಗೆ ಸಮೀಪದಲ್ಲಿ ಮಾರುಕಟ್ಟೆ ಇಲ್ಲ. ಹೀಗಾಗಿ ಲಿಂಗಸುಗೂರಿನಿಂದ ರಾಮನಗರ ಮಾರುಕಟ್ಟೆಗೆ ಹೋಗಬೇಕಾದ ಸ್ಥಿತಿ ಇದೆ. ರೇಷ್ಮೆ ಮಾರಾಟ ಮಾಡಬೇಕೆಂದರೆ ಸಾಗಣೆಯ ವೆಚ್ಚವೇ ಹೊರೆಯಾಗುತ್ತಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಆರಕ್ಕೆ ಏರಿಲ್ಲ. ಮೂರಕ್ಕೆ ಇಳಿದಿಲ್ಲ ಎಂದು ಲಿಂಗಸುಗೂರಿನ ರೇಷ್ಮೆ ಬೆಳೆಗಾರ ಭೀಮಸೇನ ಉದ್ದಾರ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.