
ಮುಂಬೈ: ದೇಶದ ಏರೋಸ್ಪೇಸ್, ಡ್ರೋನ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮವು 2033ರ ವೇಳೆಗೆ ಐದು ಪಟ್ಟು ಬೆಳವಣಿಗೆ ಕಂಡು ₹3.97 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದೆ ಎಂದು ಕಾರ್ಮಿಕ ಸೇವೆಗಳ ವಲಯದಲ್ಲಿ ಕಾರ್ಯನಿರ್ವಹಿಸುವ ಅಡೆಕ್ಕೊ ಇಂಡಿಯಾ ವರದಿ ತಿಳಿಸಿದೆ.
ಇದೇ ಅವಧಿಯಲ್ಲಿ ಈ ಉದ್ಯಮಗಳಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ತಿಳಿಸಿದೆ.
ಸರ್ಕಾರದ ನಿಯಮಗಳಲ್ಲಿನ ಸುಧಾರಣೆಗಳು, ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಸಹಯೋಗದಿಂದ ಉದ್ಯಮವು ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಈ ಉದ್ಯಮದಲ್ಲಿ ಎಂಜಿನಿಯರ್‌ಗಳು, ಸಂಶೋಧಕರು, ಡೇಟಾ ಸೈಂಟಿಸ್ಟ್ ಮತ್ತು ವ್ಯವಹಾರ ವೃತ್ತಿಪರರು ಸೇರಿದಂತೆ 2 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಹೆಚ್ಚುವರಿಯಾಗಿ, ಬಾಹ್ಯಾಕಾಶ ನೀತಿ ವಿಶ್ಲೇಷಕರು, ರೊಬೊಟಿಕ್ಸ್ ಎಂಜಿನಿಯರ್‌ಗಳು, ಏವಿಯಾನಿಕ್ಸ್ ತಜ್ಞರಂತಹ ಹೊಸ ಹುದ್ದೆಗಳು ಬಾಹ್ಯಾಕಾಶ ವಲಯಕ್ಕೆ ಪ್ರಮುಖವಾಗಲಿವೆ. ಅಡೆಕ್ಕೊ ಇಂಡಿಯಾ ತನ್ನ 100ಕ್ಕೂ ಹೆಚ್ಚು ಗ್ರಾಹಕರಿಂದ ಪಡೆದ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಿದೆ.
ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್, ಪುಣೆ ಮುಂತಾದ ಪ್ರದೇಶಗಳು ಗರಿಷ್ಠ ಅವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಗೆ ದೇಶದ ಬಾಹ್ಯಾಕಾಶ ಆರ್ಥಿಕತೆಯ ಕೊಡುಗೆ ಶೇ 2ರಷ್ಟು ಮಾತ್ರ. ಇದನ್ನು 2033ರ ವೇಳೆಗೆ ₹3.97 ಲಕ್ಷ ಕೋಟಿಗೆ ಹೆಚ್ಚಿಸಲು ಸರ್ಕಾರ ಮಹತ್ವಾಕಾಂಕ್ಷೆ ಹೊಂದಿದೆ. ಈ ಪೈಕಿ ₹1 ಲಕ್ಷ ಕೋಟಿ ಮೌಲ್ಯದಷ್ಟು ರಫ್ತು ಗುರಿ ಇದೆ. ಈ ಮೂಲಕ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ದೇಶದ ಪಾಲನ್ನು ಶೇ 7ರಿಂದ ಶೇ 8ಕ್ಕೆ ಹೆಚ್ಚಿಸಲು ಗುರಿ ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.