ADVERTISEMENT

ದೇಶಕ್ಕೆ ಬೇಕು 30 ಸಾವಿರ ಪೈಲಟ್‌ಗಳು: ಕೇಂದ್ರ ವಿಮಾನಯಾನ ಸಚಿವ

ಸರಕುಗಳ ಸಾಗಣೆಗೆ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

ಪಿಟಿಐ
Published 16 ನವೆಂಬರ್ 2025, 0:03 IST
Last Updated 16 ನವೆಂಬರ್ 2025, 0:03 IST
ಕೆ. ರಾಮ್‌ಮೋಹನ್‌ ನಾಯ್ಡು
ಕೆ. ರಾಮ್‌ಮೋಹನ್‌ ನಾಯ್ಡು   

ವಿಶಾಖಪಟ್ಟಣ: ‘ದೇಶದ ವಿಮಾನಯಾನ ಕಂಪನಿಗಳು 1,700 ವಿಮಾನಗಳ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಿವೆ. ಈ ವಿಮಾನಗಳು ದೇಶಕ್ಕೆ ಬಂದ ಬಳಿಕ ಹೆಚ್ಚುವರಿಯಾಗಿ 30 ಸಾವಿರ ಪೈಲಟ್‌ಗಳು ಬೇಕಾಗಲಿದ್ದಾರೆ’ ಎಂದು ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್‌ ನಾಯ್ಡು ಶನಿವಾರ ಹೇಳಿದ್ದಾರೆ.

ಜಾಗತಿಕ ಲಾಜಿಸ್ಟಿಕ್ಸ್‌ ಕಂಪನಿ ಫೆಡ್‌ಎಕ್ಸ್‌, ಸರಕುಗಳ ಸಾಗಣೆಗೆ ಅಮೆರಿಕದಲ್ಲಿ ಪ್ರತ್ಯೇಕವಾಗಿ ವಿಮಾನ ನಿಲ್ದಾಣ ಹೊಂದಿದೆ. ಇದೇ ಮಾದರಿಯಲ್ಲಿ ದೇಶದಲ್ಲಿ ಸರಕುಗಳ ಸಾಗಣೆಗಾಗಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ 834 ವಿಮಾನಗಳಿದ್ದು, 8 ಸಾವಿರ ಪೈಲಟ್‌ಗಳು ಇದ್ದಾರೆ. ಈ ಪೈಕಿ 2 ಸಾವಿರದಿಂದ 3 ಸಾವಿರ ಪೈಲಟ್‌ಗಳು ಸೇವೆಗೆ ಸಕ್ರಿಯವಾಗಿ ಲಭ್ಯರಿಲ್ಲ. 

ADVERTISEMENT

ದೇಶದ ವಿಮಾನಯಾನ ಕಂಪನಿಗಳು, ವಿಮಾನ ತಯಾರಿಕಾ ಕಂಪನಿಗಳಾದ ಬೋಯಿಂಗ್ ಮತ್ತು ಏರ್‌ಬಸ್‌ಗೆ 1,700 ವಿಮಾನಗಳ ತಯಾರಿಕೆಗೆ ಕಾರ್ಯಾದೇಶ ನೀಡಿವೆ. ಈ ವಿಮಾನಗಳು ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಹಾರಾಟ ಆರಂಭಿಸಿದರೆ, ಪ್ರತಿ ವಿಮಾನದ ಕಾರ್ಯಾಚರಣೆಗೆ ಕನಿಷ್ಠ 10ರಿಂದ 15 ಪೈಲಟ್‌ಗಳು ಬೇಕಾಗಲಿದ್ದಾರೆ. 1,700 ವಿಮಾನಗಳಿಗೆ ಕನಿಷ್ಠ 25 ಸಾವಿರದಿಂದ 30 ಸಾವಿರ ಪೈಲಟ್‌ಗಳಿಗೆ ಬೇಡಿಕೆ ಉಂಟಾಗಲಿದೆ ಎಂದು ಹೇಳಿದ್ದಾರೆ. 

ಈ ಬೇಡಿಕೆ ಪೂರೈಸಲು ವಿಮಾನ ಹಾರಾಟ ತರಬೇತಿ ಸಂಸ್ಥೆಗಳ (ಎಫ್‌ಟಿಒ) ಸಂಖ್ಯೆ ಹೆಚ್ಚಾಗಬೇಕಿದೆ. ದೇಶದ ವಿಮಾನಯಾನ ವಲಯದ ಒಂದು ಉದ್ಯೋಗವು 15 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ ಯುವಕರಿಗೆ ವಿಮಾನ ಹಾರಾಟದ ತರಬೇತಿ, ಕೌಶಲ ನೀಡುವ ಅಗತ್ಯವಿದೆ. ವಿಮಾನ ನಿಲ್ದಾಣ ನಿರ್ವಾಹಕರು ಪ್ರಯಾಣಿಕರಿಗೆ ಸೌಲಭ್ಯಗಳನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸುತ್ತಿದ್ದಾರೆ, ವಿಮಾನಗಳ ಮೂಲಕ ಸರಕು ಸಾಗಣೆ ಮಾಡುವ ಕೆಲಸವು ಆದ್ಯತೆ ಪಡೆಯುತ್ತಿಲ್ಲ. ರೈಲು ಮತ್ತು ರಸ್ತೆ ಮೂಲಕ ಸರಕು ಸಾಗಣೆ ಮಾಡುವ ವೆಚ್ಚವು ಕಡಿಮೆ ಇರುವುದರಿಂದ ವಿಮಾನದ ಮೂಲಕ ಸರಕು ಸಾಗಿಸುವ ವಲಯವು ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರಸ್ತುತ ₹17 ಸಾವಿರ ಕೋಟಿ ಮೌಲ್ಯದಷ್ಟು ವಿಮಾನ ಬಿಡಿಭಾಗಗಳು ತಯಾರಾಗುತ್ತಿವೆ. 2030ರ ವೇಳೆಗೆ ಈ ಮೊತ್ತವನ್ನು ₹35 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿಯೇ ವಿಮಾನಗಳ ಪೂರ್ಣ ವಿನ್ಯಾಸ ಮತ್ತು ತಯಾರಿಕೆಯ ದೀರ್ಘಾವಧಿ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರತಿ ದಿನ ಸರಾಸರಿ 4.8 ಲಕ್ಷ ಜನ ವಿಮಾನಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.