ADVERTISEMENT

ರಫ್ತು ನಿಷೇಧ: ಬಾಂಗ್ಲಾ, ಶ್ರೀಲಂಕಾ, ನೇಪಾಳದವರಿಗೂ ಕಣ್ಣೀರು ತರಿಸಿದ ಈರುಳ್ಳಿ

ಗಣನೀಯ ಪ್ರಮಾಣದಲ್ಲಿ ಬೆಲೆ ಏರಿಕೆ

ರಾಯಿಟರ್ಸ್
Published 3 ಅಕ್ಟೋಬರ್ 2019, 8:32 IST
Last Updated 3 ಅಕ್ಟೋಬರ್ 2019, 8:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಬೆಲೆ ಏರಿಕೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ ಬೆನ್ನಲ್ಲೇ ಏಷ್ಯಾದ ಇತರ ರಾಷ್ಟ್ರಗಳ ಮೇಲೆ ಅದು ಪರಿಣಾಮ ಬೀರಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಸೇರಿ ಏಷ್ಯಾ ರಾಷ್ಟ್ರಗಳಲ್ಲಿ ಈರುಳ್ಳಿ ಬೆಲೆ ಭಾರೀ ಏರಿಕೆಯಾಗಿದೆ.

ಈ ರಾಷ್ಟ್ರಗಳಿಗೆ ಚೀನಾ, ಈಜಿಪ್ಟ್‌ಗಳಿಂದಲೂ ಈರುಳ್ಳಿ ರಫ್ತಾಗುತ್ತಿದೆ. ಆದರೆ, ಭಾರತದಿಂದ ಶೀಘ್ರ ಸಾಗಾಟ ಮಾಡಲು ಅವಕಾಶ ಇರುವುದರಿಂದ ಇಲ್ಲಿನ ಈರುಳ್ಳಿಯನ್ನೇ ಅವು ಹೆಚ್ಚಾಗಿ ನೆಚ್ಚಿಕೊಂಡಿವೆ. ಹೀಗಾಗಿ ಭಾರತ ರಫ್ತು ನಿಷೇಧ ಮಾಡಿರುವುದು ನೇರ ಪರಿಣಾಮ ಬೀರಿದೆ.

ಇದು ಭೀಕರ ದರ ಏರಿಕೆ ಎಂದು ನೇಪಾಳದ ರಾಜಧಾನಿ ಕಠ್ಮಂಡುವಿನ ಮಹಿಳೆ ಸೀಮಾ ಪೊಖರೆಲ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ADVERTISEMENT

ರಫ್ತು ನಿಷೇಧದ ಬೆನ್ನಲ್ಲೇ ಬಾಂಗ್ಲಾ, ನೇಪಾಳ ಮತ್ತಿತರ ರಾಷ್ಟ್ರಗಳು ಮ್ಯಾನ್ಮಾರ್, ಈಜಿಪ್ಟ್, ಟರ್ಕಿ ಮತ್ತು ಚೀನಾಗಳಿಂದ ಹೆಚ್ಚು ಆಮದು ಮಾಡಿಕೊಳ್ಳಲು ಆರಂಭಿಸಿದ್ದು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿವೆ. ಆದರೂ ಪ್ರಯೋಜನವಾಗಿಲ್ಲ.

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ದಾಖಲೆಗಳ ಪ್ರಕಾರ, 2018-19ನೇ ಹಣಕಾಸು ವರ್ಷದಲ್ಲಿ ಭಾರತ 22 ಲಕ್ಷ ಟನ್ ಈರುಳ್ಳಿ ರಫ್ತು ಮಾಡಿದೆ. ಇದು ಏಷ್ಯಾದ ರಾಷ್ಟ್ರಗಳು ಆಮದು ಮಾಡಿಕೊಳ್ಳುವ ಒಟ್ಟು ಈರುಳ್ಳಿಯ ಪ್ರಮಾಣದ ಅರ್ಧಕ್ಕಿಂತಲೂ ಹೆಚ್ಚು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯ ಸರಕು ಪೂರೈಕೆದಾರರೂ ದರ ಹೆಚ್ಚಿಸುತ್ತಿರುವುದು ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಢಾಕಾದ ವ್ಯಾಪರಿ ಮೊಹಮ್ಮದ್ ಇದ್ರಿಸ್ ತಿಳಿಸಿದ್ದಾರೆ. ಈಗ ಬಾಂಗ್ಲಾದೇಶದ ಮಾರುಕಟ್ಟೆಗಳಲ್ಲಿ 1 ಕೆ.ಜಿ.ಈರುಳ್ಳಿಗೆ 120 ಟಾಕ (ಸುಮಾರು ₹101) ದರ ಇದೆ. ಇಷ್ಟೊಂದು ಏರಿಕೆಯಾಗಿರುವುದು 2013ರ ಡಿಸೆಂಬರ್ ಬಳಿಕ ಇದೇ ಮೊದಲು ಎಂದು ಇದ್ರಿಸ್ ಹೇಳಿದ್ದಾರೆ.

‘ಭಾರತ ಈರುಳ್ಳಿ ರಫ್ತು ನಿಷೇಧಿಸಿರುವುದರಿಂದ ಇತರ ದೇಶಗಳು ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ಸರ್ಕಾರಿ ಸ್ವಾಮ್ಯದ ವ್ಯಾಪಾರಿ ನಿಗಮದ ಮೂಲಕ ಸಬ್ಸಿಡಿಸಹಿತ ಈರುಳ್ಳಿ ಮಾರಾಟ ಆರಂಭಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಆಗಸ್ಟ್‌ನಿಂದಲೂ ಈರುಳ್ಳಿ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಇನ್ನು ಕೆಲವೆಡೆ ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿಕೊಂಡಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದೂ ವರದಿಯಾಗಿತ್ತು. ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರ ಭಾನುವಾರ ಈರುಳ್ಳಿ ರಫ್ತು ನಿಷೇಧಿಸಿತ್ತು. ಜತೆಗೆ,ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.