ADVERTISEMENT

ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದಿಗೆ ಭಾರತ ಚಿಂತನೆ: ಅಧಿಕಾರಿಗಳು

ರಾಯಿಟರ್ಸ್
Published 14 ಮಾರ್ಚ್ 2022, 11:38 IST
Last Updated 14 ಮಾರ್ಚ್ 2022, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳ ಕಠಿಣ ನಿರ್ಬಂಧಗಳ ನಡುವೆಯೂಕಚ್ಚಾ ತೈಲ ಹಾಗೂ ಇತರ ಸರಕುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಪ್ರಸ್ತಾಪವನ್ನು ಭಾರತ ಪರಿಗಣಿಸಿರುವುದಾಗಿಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ತೈಲ ಹಾಗೂ ಸರಕುಗಳಿಗೆ ಪಾವತಿಸಲು ರೂಪಾಯಿ-ರೂಬೆಲ್ ವಟಿವಾಟಿನ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರೂಬೆಲ್ ಮೌಲ್ಯ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಭಾರತವು ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಉಕ್ರೇನ್ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ದೇಶವು ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸುವುದಾಗಿ ಪ್ರಸ್ತಾಪ ಮುಂದಿರಿಸಿತ್ತು.

ಭಾರತ ತನ್ನ ತೈಲ ಅಗತ್ಯತೆಯ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಶೇ 2ರಿಂದ 3ರಷ್ಟು ರಷ್ಯಾ ಪೂರೈಸುತ್ತಿವೆ.

ರಷ್ಯಾ-ಉಕ್ರೇನ್ ಸಂಘರ್ಷದ ಕಾರಣಪ್ರಸಕ್ತ ಸಾಲಿನ ತೈಲ ಬೆಲೆಯಲ್ಲಿ ಶೇ 40ರಷ್ಟು ಏರಿಕೆಯಾಗಿದ್ದು,ಭಾರತ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿದೆ.

'ತೈಲ ಹಾಗೂ ಸರಕುಗಳ ಮೇಲೆ ರಷ್ಯಾ ಭಾರಿ ರಿಯಾಯಿತಿ ಘೋಷಿಸಿದೆ. ನಾವದನ್ನು ಪಡೆದುಕೊಳ್ಳಲು ಬಯಸುತ್ತೇವೆ. ಅದಕ್ಕೂ ಮೊದಲು ಟ್ಯಾಂಕರ್, ವಿಮೆ ರಕ್ಷಣೆ ಹಾಗೂ ತೈಲ ಮಿಶ್ರಣಗಳಂತಹ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಬಳಿಕ ರಿಯಾಯಿತಿ ಪ್ರಸ್ತಾಪವನ್ನು ಪರಿಗಣಿಸಬಹುದಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ಮೇಲೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಕೆಲವು ಅಂತರರಾಷ್ಟ್ರೀಯ ಕಂಪನಿಗಳು ಅಲ್ಲಿಂದ ತೈಲ ಆಮದು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ. ಆದರೆ ನಿರ್ಬಂಧಗಳು ತೈಲ ಆಮದು ಮಾಡಿಕೊಳ್ಳುವುದಕ್ಕೆ ಭಾರತಕ್ಕೆ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಭಾರತ ಎಷ್ಟು ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ತಕ್ಷಣಕ್ಕೆ ಹಣಕಾಸು ಸಚಿವಾಲಯ ಕೂಡ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.