ADVERTISEMENT

ಕಚ್ಚಾ ತೈಲ ಆಮದಿಗೆ ಸಂಘರ್ಷಗಳ ಸಮಸ್ಯೆ: ಸಂಸತ್ತಿನ ಸಮಿತಿ

ಸರ್ಕಾರಿ ಉದ್ದಿಮೆಗಳ ಕುರಿತ ಸಂಸತ್ತಿನ ಸಮಿತಿಯ ವರದಿ ಕಳೆದ ವಾರ ಮಂಡನೆ

ಪಿಟಿಐ
Published 14 ಡಿಸೆಂಬರ್ 2025, 16:07 IST
Last Updated 14 ಡಿಸೆಂಬರ್ 2025, 16:07 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ಭಾರತವು ಕಚ್ಚಾ ತೈಲಕ್ಕಾಗಿ ಆಮದನ್ನು ನೆಚ್ಚಿಕೊಂಡಿರುವುದು ಹಾಗೂ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಾಗುತ್ತಿರುವುದು ಬಹುದೊಡ್ಡ ಸವಾಲುಗಳು ಎಂದು ಸಂಸತ್ತಿನ ಸಮಿತಿಯೊಂದು ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಇಂಧನ ಆಮದು ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅದು ಒತ್ತಾಯಿಸಿದೆ.

ಸರ್ಕಾರಿ ಉದ್ದಿಮೆಗಳ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಕಳೆದ ವಾರ ಮಂಡಿಸಲಾಗಿದೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇಕಡ 89ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ, ಸಂಘರ್ಷ, ನಿರ್ಬಂಧ, ಕಚ್ಚಾ ತೈಲ ಉತ್ಪಾದಿಸುವ ದೇಶಗಳಲ್ಲಿ ನಾಗರಿಕ ಅಶಾಂತಿ, ಹಡಗುಗಳ ಮಾರ್ಗದಲ್ಲಿ ಸಮಸ್ಯೆ ಉಂಟಾದಲ್ಲಿ ಭಾರತವು ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವರದಿಯು ಹೇಳಿದೆ.

ರಷ್ಯಾ–ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಭಾರತ ನೆಚ್ಚಿಕೊಂಡಿರುವ ಇಂಧನ ಪೂರೈಕೆ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿವೆ ಎಂದು ಹೇಳಿದೆ.

ADVERTISEMENT

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಚ್ಚಾ ತೈಲ ಆಮದು ಮೂಲಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಚುರುಕುಗೊಳಿಸಬೇಕು. ಪರ್ಯಾಯ ಆಮದು ಮಾರ್ಗಗಳನ್ನು ರೂಪಿಸಿಕೊಳ್ಳಬೇಕು, ಪೆಟ್ರೋಲಿಯಂ ಸಂಗ್ರಹಾಗಾರಗಳ ಸಾಮರ್ಥ್ಯ ಹೆಚ್ಚು ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

‘ಸಂಘರ್ಷಗಳು, ನಿರ್ಬಂಧಗಳು, ಅಶಾಂತಿಯ ಪರಿಣಾಮವಾಗಿ ಭಾರತವು ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಎದುರಿಸಬಹುದು. ಪೂರೈಕೆಯಲ್ಲಿ ವ್ಯತ್ಯಾಸ ಆದರೆ ಬೆಲೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಸಮಿತಿಯ ವರದಿ ಹೇಳಿದೆ.

ಕಚ್ಚಾ ತೈಲ ಉತ್ಪಾದನೆ ಮಾಡುವ ದೇಶಗಳ ಜೊತೆಗಿನ ರಾಜತಾಂತ್ರಿಕ ಒಡನಾಟವನ್ನು ಬಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೂಡಿ ಕೆಲಸ ಮಾಡಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.