ಮುಂಬೈ: ‘ಭಾರತ ಮತ್ತು ಯುರೋಪಿನ ಮುಕ್ತ ವಾಣಿಜ್ಯ ಒಕ್ಕೂಟದ (ಇಎಫ್‌ಟಿಎ) ಸದಸ್ಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
2024ರ ಮಾರ್ಚ್ 10ರಂದು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಟಿಇಪಿಎ) ಸಹಿ ಹಾಕಲಾಗಿತ್ತು. ಈ ಒಕ್ಕೂಟವು ಐಸ್‌ಲ್ಯಾಂಡ್, ಲೀಚ್ಟೆನ್‌ಸ್ಟೀನ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಒಳಗೊಂಡಿದೆ.
ಈ ಒಪ್ಪಂದದ ಅಡಿ ಒಕ್ಕೂಟದ ರಾಷ್ಟ್ರಗಳು ಮುಂದಿನ 15 ವರ್ಷದಲ್ಲಿ ₹8.61 ಲಕ್ಷ ಕೋಟಿ (100 ಬಿಲಿಯನ್ ಡಾಲರ್) ಮೊತ್ತದ ಹೂಡಿಕೆಯನ್ನು ಭಾರತದಲ್ಲಿ ಮಾಡಲು ನಿರ್ಧರಿಸಿವೆ. ಜೊತೆಗೆ ಇದು 10 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಶನಿವಾರ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಒಪ್ಪಂದದಿಂದಾಗಿ ಸ್ವಿಸ್ ವಾಚುಗಳು, ಚಾಕೊಲೇಟ್, ಬಿಸ್ಕತ್ತುಗಳು, ಗಡಿಯಾರ ಸೇರಿದಂತೆ ಉನ್ನತ ಗುಣಮಟ್ಟದ ವಸ್ತುಗಳು ಕಡಿಮೆ ಅಥವಾ ಶೂನ್ಯ ಸುಂಕದಲ್ಲಿ ದೇಶಿ ಗ್ರಾಹಕರಿಗೆ ದೊರೆಯಲಿವೆ. ಅಲ್ಲದೆ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಸಹ ದೊರೆಯಲಿದೆ ಎಂದು ಹೇಳಿದ್ದಾರೆ.
ದೇಶದ ಸೇವಾ ವಲಯಕ್ಕೂ ಈ ಒಪ್ಪಂದವು ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
2024–25ರ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಇಎಫ್‌ಟಿಎನ ದ್ವಿಪಕ್ಷೀಯ ವ್ಯಾಪಾರ ಮೌಲ್ಯವು ₹2.10 ಲಕ್ಷ ಕೋಟಿಯಾಗಿತ್ತು. ಈ ಒಕ್ಕೂಟದ ದೇಶಗಳ ಪೈಕಿ ಸ್ವಿಟ್ಜರ್ಲೆಂಡ್ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಉಳಿದ ದೇಶಗಳ ಜೊತೆಗೆ ಕಡಿಮೆ ವ್ಯಾಪಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.