
ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಬಳಿಕ ಇ.ಯು ಮಾರುಕಟ್ಟೆಯಲ್ಲಿ ಸುಂಕ ವಿನಾಯಿತಿ ದೊರೆಯುವುದರಿಂದ ದೇಶದ ಜವಳಿ ಉದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಸದ್ಯ, ಯುರೋಪಿಯನ್ ಒಕ್ಕೂಟದಲ್ಲಿ ಭಾರತದ ಜವಳಿ ಆಮದಿನ ಮೇಲೆ ಶೇ 0 – 12ರಷ್ಟು ಸುಂಕ ವಿಧಿಸಲಾಗುತ್ತಿದೆ.
'ಜವಳಿ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಯುವುದರಿಂದ, ಯುರೋಪಿಯನ್ ಒಕ್ಕೂಟದ ₹ 22.9 ಲಕ್ಷ ಕೋಟಿ ಮೊತ್ತದ ಆಮದು ಮಾರುಕಟ್ಟೆ ತೆರೆದುಕೊಳ್ಳಲಿದೆ' ಎಂದು ಸಚಿವಾಲಯ ಹೇಳಿದೆ.
ಕೃಷಿ ಬಳಿಕ ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜವಳಿ ಉದ್ಯಮವು, ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಯಲ್ಲಿ ಸುಂಕ ವಿನಾಯಿತಿ ಪಡೆಯಲಿರುವ ಬಾಂಗ್ಲಾದೇಶದ ಉತ್ಪನ್ನಗಳೊಂದಿಗೆ ಸ್ಪರ್ಧಿಸಲಿದೆ.
ಭಾರತವು ಸದ್ಯ, ₹ 3.19 ಲಕ್ಷ ಕೋಟಿ ಮೊತ್ತದ ಜವಳಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ, ಯುರೋಪಿಯನ್ ಒಕ್ಕೂಟಕ್ಕೆ ರಫ್ತು ಮಾಡುವ ಪ್ರಮಾಣ ₹ 65 ಸಾವಿರ ಕೋಟಿಗೂ ಅಧಿಕ. ಅದು ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪ್ರಗತಿ, ಉದ್ಯೋಗ ಸೃಷ್ಟಿ, ಸುಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಉದ್ಯಮದ ಪಾಲುದಾರನಾಗಿ ಭಾರತವು ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಒಪ್ಪಂದವು ಅನುವು ಮಾಡಿಕೊಡಲಿದೆ ಎಂದೂ ಸಚಿವಾಲಯ ತಿಳಿಸಿದೆ.
ಎಫ್‌ಟಿಎ ಕುರಿತು ಪ್ರತಿಕ್ರಿಯಿಸಿರುವ ಉಡುಪು ರಫ್ತು ಉತ್ತೇಜನ ಮಂಡಳಿ (ಎಇಪಿಸಿ), ಭಾರತೀಯ ಜವಳಿ ರಫ್ತು ಬೆಳವಣಿಗೆ ದರ ಪ್ರಸ್ತುತ ಶೇ 3.01ರಷ್ಟಿದೆ. ಎಫ್‌ಟಿಎ ಕಾರ್ಯರೂಪಕ್ಕೆ ಬಂದ ನಂತರ ಅದು ಪ್ರತಿವರ್ಷ ಶೇ 20-25 ರಷ್ಟು ಹೆಚ್ಚಾಗುವ ಅಂದಾಜು ಇದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.