
ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ (ಎಫ್‌ಟಿಎ) ಭಾರತೀಯ ವಾಹನ ತಯಾರಿಕಾ ವಲಯದಲ್ಲಿ ನಾವೀನ್ಯತೆಗೆ ಉತ್ತೇಜನ ದೊರೆಯಲಿದೆ ಎಂದು ಮರ್ಸಿಡೀಸ್–ಬೆಂಜ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ಆದರೆ, ಒಪ್ಪಂದದ ಪರಿಣಾಮವಾಗಿ ತಮ್ಮ ಕಂಪನಿಯ ವಾಹನಗಳ ಬೆಲೆ ಇಳಿಕೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅಲ್ಲಗಳೆದಿದ್ದಾರೆ.
ಒಪ್ಪಂದವನ್ನು ಭಾರತದ ಪಾಲಿಗೆ 'ಐತಿಹಾಸಿಕ ಸಾಧನೆ' ಎಂದು ಬಣ್ಣಿಸಿರುವ ಅಯ್ಯರ್, ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಪ್ರಾತಿನಿಧ್ಯ ಹೆಚ್ಚುತ್ತಿರುವುದನ್ನು ಇದು ಪುನರುಚ್ಚರಿಸುತ್ತದೆ ಎಂದಿದ್ದಾರೆ.
'ಭವಿಷ್ಯದ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸಿರುವ ಮುಕ್ತ ವ್ಯಾಪಾರ ಒಪ್ಪಂದವು, ಭಾರತೀಯ ಆಟೊಮೊಬೈಲ್ ಕ್ಷೇತ್ರದ ತಾಂತ್ರಿಕ ನಾವೀನ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಪ್ರೇರೇಪಿಸುವ ನಿರೀಕ್ಷೆ ಇದೆ. ಒಪ್ಪಂದದ ಪ್ರತಿ ಲಭ್ಯವಾದ ಬಳಿಕವಷ್ಟೇ ಅಂತಿಮ ಪರಿಣಾಮಗಳನ್ನು ಅಂದಾಜಿಸಬಹುದು' ಎಂದು ತಿಳಿಸಿದ್ದಾರೆ.
ಎಫ್‌ಟಿಎ ಬಳಿಕ ತಮ್ಮ ಕಂಪನಿಯ ವಾಹನಗಳ ಬೆಲೆ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು, 'ಭಾರತದಲ್ಲಿ ಮಾರಾಟವಾಗುವ ಮರ್ಸಿಡೀಸ್–ಬೆಂಜ್ ವಾಹನಗಳ ಪೈಕಿ ಶೇ 90ರಷ್ಟು ಭಾರತದಲ್ಲೇ ತಯಾರಾಗುತ್ತವೆ. ಸಂಪೂರ್ಣವಾಗಿ ವಿದೇಶದಲ್ಲೇ ತಯಾರಿಸಲಾದ (ಸಿಬಿಯು) ಶೇ 5ರಷ್ಟು ವಾಹನಗಳನ್ನಷ್ಟೇ ಇ.ಯು ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಕಂಪನಿಯ ವಾಹನಗಳ ಬೆಲೆ ಕಡಿತವನ್ನು ನಿರೀಕ್ಷಿಸಲಾಗದು' ಎಂದು ಮಾಹಿತಿ ನೀಡಿದ್ದಾರೆ.
'ಸ್ಥಳೀಯವಾಗಿ ತಯಾರಿಕೆ, ಸ್ಪರ್ಧಾತ್ಮಕ ಬೆಲೆ ಮೂಲಕ ಗ್ರಾಹಕರಿಗೆ ಗುಣಮಟ್ಟದ ವಾಹನಗಳನ್ನು ಪೂರೈಸುವುದರತ್ತ ಗಮನಹರಿಸುತ್ತೇವೆ. ಭಾರತೀಯ ಗ್ರಾಹಕರಿಗೆ ದೇಶದಲ್ಲೇ ಅತ್ಯುತ್ತಮ ದರ್ಜೆಯ ವಾಹನಗಳನ್ನು ತಯಾರಿಸುವುದನ್ನು ಮುಂದುವರಿಸುತ್ತೇವೆ' ಎಂದಿದ್ದಾರೆ.
ಯುರೋ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಯುರೋಪಿಯನ್ ಕಾರು ತಯಾರಕ ಕಂಪನಿಗಳಿಗೆ ಭಾರತದಲ್ಲಿ ಸವಾಲಾಗಿ ಪರಿಣಮಿಸುತ್ತಿದೆ ಎಂಬುದನ್ನೂ ಮರ್ಸಿಡೀಸ್-ಬೆಂಜ್ ಇಂಡಿಯಾ ಉಲ್ಲೇಖಿಸಿದೆ.
2025ರಲ್ಲಿ ಯುರೋ ಎದುರು ರೂಪಾಯಿ ಮೌಲ್ಯ ಶೇ 19ರಷ್ಟು ಕುಸಿದಿದೆ. ಹೀಗಾಗಿ, ಮುಂದಿನ ಒಂದೆರಡು ವರ್ಷಗಳಲ್ಲಿ ಸಿಬಿಯು ವಾಹನಗಳ ಆಮದಿನ ಮೇಲಿನ ಸುಂಕವನ್ನು ಕಡಿತಗೊಳಿಸುವುದರಿಂದ ಆಗುವ ಪ್ರಯೋಜನವೂ ಕುಸಿಯುವ ಸಾಧ್ಯತೆ ಇದೆ.
ಮರ್ಸಿಡೀಸ್-ಬೆಂಜ್ ಯಾವಾಗಲೂ ಮುಕ್ತ ವ್ಯಾಪಾರಕ್ಕೆ ಒತ್ತು ನೀಡುತ್ತದೆ ಎಂದಿರುವ ಅಯ್ಯರ್, ಈ ಒಪ್ಪಂದವು ವ್ಯಾಪಾರದ ಅಡೆತಡೆಗಳನ್ನು ಹಾಗೂ ಜಾಗತಿಕ ಪೂರೈಕೆ ಸರಪಳಿಯ ಅನಿಶ್ಚಿತತೆಯನ್ನು ತಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.