
ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಅಕ್ಟೋಬರ್ ತಿಂಗಳಿನಲ್ಲಿ 13 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂಕಿ–ಅಂಶಗಳು ಸೋಮವಾರ ತಿಳಿಸಿದೆ.
ಪ್ರಸಕ್ತ ವರ್ಷದ ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 0.4ರಷ್ಟು ಬೆಳವಣಿಗೆ ದಾಖಲಿಸಿದೆ. 2024ರ ಅಕ್ಟೋಬರ್‌ನಲ್ಲಿ ಶೇ 3.7ರಷ್ಟು ದಾಖಲಾಗಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಯಾವುದೇ ಪ್ರಗತಿ ದಾಖಲಿಸಿಲ್ಲ.
ವಿದ್ಯುತ್, ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಉತ್ಪಾದನೆಯಲ್ಲಿನ ಇಳಿಕೆಯೇ ಬೆಳವಣಿಗೆ ಇಳಿಕೆಗೆ ಕಾರಣ ಎಂದು ತಿಳಿಸಿದೆ. ದಸರಾ, ದೀಪಾವಳಿ, ಛತ್ ಸೇರಿದಂತೆ ಹಲವು ಹಬ್ಬಗಳ ಕಾರಣದಿಂದ ಕೆಲಸದ ದಿನಗಳು ಕಡಿಮೆ ಆಗಿದೆ. ಇದು ಸಹ ಪ್ರಗತಿ ನಿಧಾನವಾಗಲು ಕಾರಣವಾಗಿದೆ ಎಂದು ಹೇಳಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತಯಾರಿಕಾ ವಲಯದ ಉತ್ಪಾದನೆ ಶೇ 4.4ರಷ್ಟಾಗಿತ್ತು. ಅದು ಈ ಬಾರಿ ಶೇ 1.8ಕ್ಕೆ ಇಳಿದಿದೆ. ಗಣಿಗಾರಿಕೆಯು ಶೇ 0.9ರಿಂದ (–) ಶೇ 1.8ರಷ್ಟಾಗಿದೆ. ವಿದ್ಯುತ್ ಉತ್ಪಾದನೆಯು ಶೇ 2ರಿಂದ (–) ಶೇ 6.9ಕ್ಕೆ ಕಡಿಮೆ ಆಗಿದೆ. ಆದರೆ, ಮೂಲಸೌಕರ್ಯ ವಲಯದ ಬೆಳವಣಿಗೆ ಶೇ 4.7ರಿಂದ ಶೇ 7.1ಕ್ಕೆ ಏರಿಕೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಶೇ 4ರಿಂದ ಶೇ 2.7ಕ್ಕೆ ಕುಸಿದಿದೆ ಎಂದು ತಿಳಿಸಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.