ಗುವಾಹಟಿ: ‘ಪೆಟ್ರೋಲ್‌ನೊಂದಿಗೆ ಶೇ 20ರಷ್ಟಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುವ ಗುರಿ ನಿಗದಿಗೆ ಸಂಬಂಧಿಸಿದಂತೆ ನೀತಿ ಆಯೋಗದಡಿ ಸಮಿತಿ ರಚಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘2026ರೊಳಗೆ ಶೇ 20ರಷ್ಟು ಎಥೆನಾಲ್ ಮಿಶ್ರಣದ ಗುರಿ ನಿಗದಿಯಾಗಿತ್ತು. ಸದ್ಯ ಶೇ 19.6ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ತಿಂಗಳು ನಿಗದಿತ ಗುರಿ ಪೂರ್ಣಗೊಳ್ಳಲಿದೆ’ ಎಂದು ವಿವರಿಸಿದರು.
ಪೆಟ್ರೋಲ್‌ನೊಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವತ್ತ ಸರ್ಕಾರ ಚಿತ್ತ ನೆಟ್ಟಿದೆ. ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ ಎಂದರು.
ದೇಶದ ಎಥೆನಾಲ್ ಉತ್ಪಾದನಾ ಸಾಮರ್ಥ್ಯವು 1,700 ಕೋಟಿ ಲೀಟರ್ ಆಗಿದೆ. ಈ ಪೈಕಿ ಪೆಟ್ರೋಲ್‌ನೊಂದಿಗೆ 1,500 ಕೋಟಿ ಲೀಟರ್ ಮಿಶ್ರಣ ಮಾಡಲಾಗಿದೆ ಎಂದು ಹೇಳಿದರು.
ಭಾರತವು ವಾರ್ಷಿಕವಾಗಿ ವಿದೇಶಗಳಿಂದ ತೈಲ ಆಮದಿಗೆ ₹13 ಲಕ್ಷ ಕೋಟಿ ಮೊತ್ತವನ್ನು ವ್ಯಯಿಸುತ್ತದೆ. ಆಮದು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯತ್ತ ದೃಷ್ಟಿ ನೆಟ್ಟಿದೆ ಎಂದರು.
ಪ್ರಸ್ತುತ ಹಸಿರು ಹೈಡ್ರೋಜನ್ ಬೆಲೆಯು ಕೆ.ಜಿಗೆ ₹390 ಇದೆ. ಇದು ಅರ್ಧದಷ್ಟು ತಗ್ಗಿದರೆ ಇಂಧನ ವಲಯದಲ್ಲಿ ಹೊಸ ಕ್ರಾಂತಿಯಾಗಲಿದೆ. ಸಾಂಪ್ರದಾಯಿಕ ಇಂಧನ ಬಳಕೆಯ ಬದಲು ನಾವು ಹಸಿರು ಹೈಡ್ರೋಜನ್ ಬಳಕೆಯತ್ತ ಗಮನ ಹರಿಸಿದ್ದೇವೆ ಎಂದರು.
ವಿಶ್ವದ ಪ್ರತಿ ದೇಶವೂ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸಿದೆ. ಇಂಧನ ವಲಯದಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ಆರ್ಥಿಕತೆ ಬೆಳವಣಿಗೆ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.