ADVERTISEMENT

ಬ್ರಿಟನ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ: ವರದಿ

ಪಿಟಿಐ
Published 3 ಸೆಪ್ಟೆಂಬರ್ 2022, 15:40 IST
Last Updated 3 ಸೆಪ್ಟೆಂಬರ್ 2022, 15:40 IST
   

ನವದೆಹಲಿ:ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಅಂದಾಜಿನ ಪ್ರಕಾರ, ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದರಿಂದಾಗಿ ಇಂಗ್ಲೆಂಡ್‌ ಆರನೇ ಸ್ಥಾನಕ್ಕೆ ಇಳಿಕೆ ಕಂಡಿದೆ.

ದಶಕದ ಹಿಂದೆ ಭಾರತವು 11ನೇ ಸ್ಥಾನದಲ್ಲಿ ಇದ್ದರೆ, ಇಂಗ್ಲೆಂಡ್‌ 5ನೇ ಸ್ಥಾನದಲ್ಲಿ ಇತ್ತು.

ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಕಂಡಿರುವ ದಾಖಲೆಯ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತವು ಇಂಗ್ಲೆಂಡ್‌ ಅನ್ನು ಹಿಂದಿಕ್ಕಿದೆ. ಹೀಗಾಗಿ ಇಂಗ್ಲೆಂಡ್‌ ಆರನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಅಂಕಿ–ಅಂಶಗಳ ಪ್ರಕಾರ, ಭಾರತದ ಜಿಡಿಪಿಯು ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 13.5ರಷ್ಟು ಬೆಳವಣಿಗೆ ಕಂಡಿದ್ದು, ಒಂದು ವರ್ಷದಲ್ಲಿಯೇ ಅತ್ಯಂತ ವೇಗದ ಬೆಳವಣಿಗೆ ಇದಾಗಿದೆ.

ADVERTISEMENT

ಜಗತ್ತಿನ ಅತಿದೊಡ್ಡ ಆರ್ಥಿಕತೆಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಚೀನಾ, ಜಪಾನ್‌ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ.

ಐಎಂಎಫ್‌ನ ದತ್ತಾಂಶ ಮತ್ತು ವಿನಿಮಯ ದರವನ್ನು ಆಧಾರವಾಗಿ ಇಟ್ಟುಕೊಂಡು ಬ್ಲೂಮ್‌ಬರ್ಗ್‌ ಸಹ ಭಾರತವು 5ನೇ ಸ್ಥಾನಕ್ಕೆ ಏರಿಕೆ ಎಂದು ಹೇಳಿದೆ. ಭಾರತದ ಆರ್ಥಿಕತೆಯ ಮೌಲ್ಯವು ಮಾರ್ಚ್‌ ತ್ರೈಮಾಸಿಕದಲ್ಲಿ ₹68.20 ಲಕ್ಷ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್‌ನ ಆರ್ಥಿಕತೆಯ ಮೌಲ್ಯವು ₹65.11 ಲಕ್ಷ ಕೋಟಿ ಇದೆ ಎಂದು ಬ್ಲೂಮ್‌ಬರ್ಗ್‌ ವರದಿಯಲ್ಲಿ ತಿಳಿಸಲಾಗಿದೆ.

‘ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಆರ್ಥಿಕತೆಗೆ ಇದೊಂದು ಮಹತ್ವದ ಮೈಲಿಗಲ್ಲು. ಇನ್ನು ಕೆಲವೇ ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆ ಆಗಲಿದ್ದೇವೆ’ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್‌ ಅಗರ್ವಾಲ್‌ ಟ್ವೀಟ್‌ ಮಾಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.