
ಪ್ರಾತಿನಿಧಿಕ ಚಿತ್ರ
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಪ್ರಯಾಣಿಕ ವಾಹನಗಳ ರಫ್ತು ಪ್ರಮಾಣ ಶೇ 18ರಷ್ಟು ಏರಿಕೆ ಆಗಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟದ (ಎಸ್‌ಐಎಎಂ) ಅಂಕಿ– ಅಂಶಗಳು ಹೇಳಿವೆ.
ಮಾರುತಿ ಸುಜುಕಿ ಕಂಪನಿಯ 2 ಲಕ್ಷಕ್ಕೂ ಅಧಿಕ ವಾಹನಗಳು ರಫ್ತಾಗಿವೆ. ಕಳೆದ ಆರ್ಥಿಕ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ 3,76,679 ವಾಹನಗಳು ರಫ್ತಾಗಿದ್ದವು. ಈ ವರ್ಷದ ಇದೇ ಅವಧಿಯಲ್ಲಿ 4,45,884 ವಾಹನಗಳು ರಫ್ತಾಗಿವೆ.
ಕಾರುಗಳ ರಫ್ತಿನಲ್ಲಿ ಶೇ 12ರಷ್ಟು ಏರಿಕೆಯಾಗಿದ್ದು, 2,29,281 ವಾಹನಗಳು ರಫ್ತಾಗಿವೆ. ಯುಟಿಲಿಟಿ ವಾಹನಗಳ ರಫ್ತು ಶೇ 26ರಷ್ಟು ಹೆಚ್ಚಾಗಿದ್ದು, 2,11,373 ವಾಹನಗಳು ರಫ್ತಾಗಿವೆ. 5,230 ವ್ಯಾನ್‌ಗಳು ರಫ್ತಾಗಿದ್ದು, ಕಳೆದ ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ ಶೇ 36.5ರಷ್ಟು ಏರಿಕೆ ಆಗಿದೆ.
ಮಾರುತಿ ಸುಜುಕಿ ಕಂಪನಿಯ ವಾಹನಗಳ ರಫ್ತು ಶೇ 40ರಷ್ಟು ಜಿಗಿತವಾಗಿದ್ದು, 2,05,763 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,47,063 ವಾಹನಗಳು ಮಾರಾಟವಾಗಿದ್ದವು. ಹುಂಡೈ ಮೋಟರ್ ಇಂಡಿಯಾ 99,540 (ಶೇ 17), ನಿಸ್ಸಾನ್ ಮೋಟರ್ ಇಂಡಿಯಾ 37,605, ಫೋಕ್ಸ್‌ವ್ಯಾಗನ್ ಇಂಡಿಯಾ 28,011, ಟೊಯೊಟ ಕಿರ್ಲೋಸ್ಕರ್ ಮೋಟರ್ 18,880, ಕಿಯಾ ಇಂಡಿಯಾ 13,666 ಮತ್ತು ಹೋಂಡಾ ಕಾರ್ಸ್ ಇಂಡಿಯಾದ 13,243 ವಾಹನಗಳು ರಫ್ತಾಗಿವೆ ಎಂದು ತಿಳಿಸಿದೆ.
ಪ್ರಮುಖವಾಗಿ ಪಶ್ಚಿಮ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರವಾದ ಬೇಡಿಕೆಯಿಂದ ಪ್ರಯಾಣಿಕ ವಾಹನಗಳ ರಫ್ತು ಬೆಳವಣಿಗೆ ಕಂಡಿದೆ.
ಹೆಚ್ಚುವರಿ ಸುಂಕದಿಂದ ಅಮೆರಿಕಕ್ಕೆ ಸೆಪ್ಟೆಂಬರ್‌ನಲ್ಲಿ ರಫ್ತು ಕಡಿಮೆಯಾಗಿದೆ. ಕೊರಿಯಾ, ಯುಎಇ ಸೇರಿದಂತೆ 24 ರಾಷ್ಟ್ರಗಳಿಗೆ ದೇಶದ ರಫ್ತು ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಸದೃಢವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.