ಮುಂಬೈ ಷೇರು ಮಾರುಕಟ್ಟೆ
ರಾಯಿಟರ್ಸ್
ಬೆಂಗಳೂರು: ಭಾರತದ ಬ್ಲೂ ಚಿಪ್ ಇಂಡೆಕ್ಸ್‌ಗಳಾದ ನಿಫ್ಟಿ 50 ಹಾಗೂ ಸೆನ್ಸೆಕ್ಸ್ ನೂತನ ದಾಖಲೆಯ ಎತ್ತರಕ್ಕೆ ಶುಕ್ರವಾರ ಏರಿದ್ದು, ದೇಶೀಯ ಹೂಡಿಕೆದಾರರು ತೋರಿದ ಹೆಚ್ಚಿನ ಆಸಕ್ತಿಯ ಪರಿಣಾಮ ಗೂಳಿಯ ನೆಗೆತ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತು.
ಬ್ಲೂ ಚಿಪ್ ಇಂಡೆಕ್ಸ್ NSE Nifty 50ಯು 22,312.65 ಅಂಶಗಳೊಂದಿಗೆ ಶೇ 1.50ರಷ್ಟು ವೃದ್ಧಿ ಕಂಡರೆ, BSE ಸೆನ್ಸೆಕ್ಸ್ ಕೂಡಾ 73,588.04 ಅಂಶಗಳೊಂದಿಗೆ ಶೇ 1.50ರ ಬೆಳವಣಿಗೆ ದಾಖಲಿಸಿತು.
13 ಪ್ರಮುಖ ಕ್ಷೇತ್ರಗಳನ್ನು ಪರಿಗಣಿಸಿದರೆ 10ರಲ್ಲಿ ಲಾಭಾಂಶ ದಾಖಲಾಯಿತು. ಸಣ್ಣ ಮತ್ತು ಮಧ್ಯಮ ಹೂಡಿಕೆಯತ್ತ ದೇಶೀಯ ಹೂಡಿಕೆದಾರರ ಆಸಕ್ತಿಯಿಂದಾಗಿ ಈ ಕ್ಷೇತ್ರವು ಶೇ 0.6ರಷ್ಟು ಬೆಳವಣಿಗೆ ಕಂಡಿತು.
NSEಯಲ್ಲಿರುವ ಭಾರತೀಯ ಷೇರುಗಳು ಬೆಳವಣಿಗೆ ಕಂಡಿದ್ದು ಇದು 4.64 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಎತ್ತರಕ್ಕೆ ಏರಿದೆ. ನಿಫ್ಟಿ 50ರಲ್ಲಿನ ಎಂಟು ಷೇರುಗಳು ದಾಖಲೆಯ ಏರಿಕೆ ಕಂಡಿವೆ. ಇದರ ಪ್ರಮಾಣ 4.69 ಟ್ರಿಲಿಯನ್ ಅಮೆರಿಕನ್ ಡಾಲರ್. ಇದರೊಂದಿಗೆ ನಿಫ್ಟಿ 50ಯಲ್ಲಿನ ಇತರ 18 ಷೇರುಗಳು 2024ರಲ್ಲೇ ಈವರೆಗಿನ ಅತ್ಯಂತ ಹೆಚ್ಚಿನ ಗಳಿಕೆ ಕಂಡಿವೆ.
ಭಾರತದ ಆರ್ಥಿಕತೆಯು ಶೇ 8.4ರ ದರದಲ್ಲಿ ಏರಿಕೆ ಕಂಡಿರುವ ಸುದ್ದಿ ಗುರುವಾರ ವರದಿಯಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸಂಚಲನ ಸೃಷ್ಟಿಸಿತು. ಇದರ ಪರಿಣಾಮ ಹೇರಳವಾದ ಬಂಡವಾಳವು ಮಾರುಕಟ್ಟೆಯತ್ತ ಹರಿದುಬಂತು. ಕಳೆದ ಆರು ತ್ರೈಮಾಸಿಕದಲ್ಲಿ ಇದು ಅತ್ಯಂತ ಗರಿಷ್ಠ ಎಂದೆನ್ನಲಾಗಿದೆ. ಅಷ್ಟು ಮಾತ್ರವಲ್ಲ ಇದು ಈವರೆಗಿನ ನಿರೀಕ್ಷೆಯನ್ನೂ ಮೀರಿದೆ.
‘ಈವರೆಗಿನ ಎಲ್ಲಾ ಬೆಳವಣಿಗೆಯನ್ನು ಪರಿಗಣಿಸಿದರೆ ನಿಫ್ಟಿಯು ಮಾರ್ಚ್‌ನಲ್ಲಿ ಹೊಸ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ. ಆದರೆ ಮುಂದೆ ಅದು ಅದೇ ದರವನ್ನು ಕಾಯ್ದುಕೊಳ್ಳಲಿದೆಯೇ ಎಂಬುದೇ ಸವಾಲಾಗಿದೆ’ ಎಂದು ಷೇರು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆಯಾದ ನೂವಾಮಾ ಆಲ್ಟರ್ನೇಟಿವ್ ಆ್ಯಂಡ್ ಕ್ವಾಂಟಿಟೇಟಿವ್ ರಿಸರ್ಚ್ ಹೇಳಿದೆ.
ದೇಶದ ಜಿಡಿಪಿ ಜಿಗಿತ ಹಾಗೂ ಅಮೆರಿಕದಲ್ಲಿನ ಹಣುದುಬ್ಬರದ ಪರಿಣಾಮ ಷೇರುಪೇಟೆಯಲ್ಲಿ ದಾಖಲೆ ಸೃಷ್ಟಿಸಿದೆ. ಇಂಧನ, ತೈಲ, ಅನಿಲ ಕ್ಷೇತ್ರದ ಷೇರುಗಳು ಕ್ರಮವಾಗಿ ಶೇ 2ರಷ್ಟು ಹಾಗೂ ಶೇ 1.75ರಷ್ಟು ಹೆಚ್ಚಳವಾಗಿವೆ. ಮತ್ತೊಂದೆಡೆ ಬ್ಯಾಂಕಿಂಗ್ ಕ್ಷೇತ್ರಗಳ ಬೆಳವಣಿಗೆ ಶೇ 0.8ರಷ್ಟು ದಾಖಲಾಗಿದೆ.
ಲೋಹ ಕ್ಷೇತ್ರ ಶೇ 3.35ರಷ್ಟು ಬೆಳವಣಿಗೆ ಕಂಡಿದೆ. 2024ರ ಆರಂಭದ ಎರಡು ತಿಂಗಳು ಷೇರು ಮಾರುಕಟ್ಟೆಯು ಶೇ 18ರಷ್ಟು ಕುಸಿತ ಕಂಡಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.