
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 111 ದೇಶಗಳಿಗೆ ಭಾರತದಿಂದ ಆಗಿರುವ ಜವಳಿ ಉತ್ಪನ್ನಗಳ ರಫ್ತು ಶೇ 10ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ದೇಶದ ಜವಳಿ ಉತ್ಪನ್ನಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹68,453 ಕೋಟಿಯಷ್ಟಾಗಿತ್ತು. ಈ ಬಾರಿ ಅದು ₹75,291 ಕೋಟಿಯಷ್ಟಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಅನಿಶ್ಚಿತತೆ, ಸುಂಕ ಸಂಬಂಧಿತ ಸವಾಲುಗಳ ನಡುವೆಯೂ ದೇಶದ ಜವಳಿ ರಫ್ತು ಮೌಲ್ಯ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಒಟ್ಟಾರೆ ದೇಶದ ಜವಳಿ ಉತ್ಪನ್ನಗಳು, ಸಿದ್ಧ ಉಡುಪುಗಳ ಜಾಗತಿಕ ರಫ್ತು ಪ್ರಮಾಣ ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 0.1ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
ಹಾಂಗ್‌ಕಾಂಗ್‌ಗೆ ದೇಶದ ರಫ್ತು ಶೇ 69ರಷ್ಟು ಹೆಚ್ಚಳವಾಗಿದೆ. ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಬ್ರಿಟನ್, ಜಪಾನ್, ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್‌ಗೆ ರಫ್ತು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಜವಳಿ ಉತ್ಪನ್ನಗಳ ಒಟ್ಟು ರಫ್ತು ಶೇ 3.42ರಷ್ಟು ಮತ್ತು ಸೆಣಬು ಶೇ 5.56ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.