ADVERTISEMENT

ಸುಂಕ ಇಲ್ಲದೇ ಯುಎಇಗೆ ಚಿನ್ನಾಭರಣ ರಫ್ತು: ಸುಬ್ರಹ್ಮಣ್ಯಂ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:00 IST
Last Updated 19 ಫೆಬ್ರುವರಿ 2022, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ–ಯುಎಇ ಮಧ್ಯೆ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ನಡೆದಿದ್ದು, ಇದರಿಂದಾಗಿ ಭಾರತದಿಂದ ರಫ್ತಾಗುವ ಚಿನ್ನಾಭರಣಗಳಿಗೆ ಯುಎಇನಲ್ಲಿ ಸುಂಕ ಇರುವುದಿಲ್ಲ. ಇದು ಭಾರತದ ಹರಳು ಮತ್ತುಚಿನ್ನಾಭರಣವಲಯಕ್ಕೆ ಹೆಚ್ಚಿನ ರಫ್ತು ಅವಕಾಶಗಳು ಕಲ್ಪಿಸಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಬಿ.ವಿ.ಆರ್‌. ಸುಬ್ರಹ್ಮಣ್ಯಂ ಹೇಳಿದ್ದಾರೆ.

ಈ ಒಪ್ಪಂದವು ಮೇ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಸದ್ಯ, ಭಾರತದಿಂದ ರಫ್ತಾಗುವ ಚಿನ್ನಾಭರಣಗಳಿಗೆ ಶೇ 5ರಷ್ಟು ಸುಂಕ ತೆರಬೇಕಾಗುತ್ತದೆ.

ಯುಎಇನಿಂದ ಭಾರತಕ್ಕೆ ವಿನಾಯಿತಿ ದರದಲ್ಲಿ ಒಂದು ವರ್ಷದಲ್ಲಿ 200 ಟನ್‌ಗಳವರೆಗೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಒಪ್ಪಂದವು ಅವಕಾಶ ಕಲ್ಪಿಸಿದೆ. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ಇರುವ ಶುಲ್ಕಕ್ಕಿಂತ ಶೇ 1ರಷ್ಟು ಕಡಿಮೆ ಪ್ರಮಾಣದಲ್ಲಿ ಯುಎಇ ಭಾರತಕ್ಕೆ ಆಮದು ಮಾಡಬಹುದಾಗಿದೆ. 2020–21ರಲ್ಲಿ ಭಾರತವು ಯುಎಇನಿಂದ 70 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಭಾರತವು ಪ್ರತಿ ವರ್ಷವೂ 800 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಈ ಒಪ್ಪಂದದಿಂದಾಗಿ ಐದು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರವು ₹ 7.5 ಲಕ್ಷ ಕೋಟಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಜವಳಿ, ಪ್ಲಾಸ್ಟಿಕ್‌, ಚರ್ಮ ಮತ್ತು ಔಷಧ ವಲಯಗಳಲ್ಲಿ 10 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀಕರ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.