ADVERTISEMENT

ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ; ಕೃಷಿಕರಿಗೆ ಹೆಚ್ಚು ಸಿಹಿ: ಇಲ್ಲಿದೆ ವಿವರ

ಪಿಟಿಐ
Published 24 ಜುಲೈ 2025, 21:48 IST
Last Updated 24 ಜುಲೈ 2025, 21:48 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್‌</p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್‌

   

ಪಿಟಿಐ ಚಿತ್ರ

ಭಾರತ ಮತ್ತು ಬ್ರಿಟನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದವನ್ನು ಅಧಿಕೃತವಾಗಿ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ) ಎಂದು ಕರೆಯಲಾಗಿದೆ. ಈ ಒಪ್ಪಂದದ ಪ್ರಮುಖ ವಿವರಗಳು ಇಲ್ಲಿವೆ.

ADVERTISEMENT

ಕೃಷಿ ವಲಯ

* ಭಾರತದ ಹಣ್ಣು, ತರಕಾರಿ, ಏಕದಳ ಧಾನ್ಯಗಳು, ಅರಿಸಿನ, ಕಾಳುಮೆಣಸು, ಏಲಕ್ಕಿ, ಮಾವಿನ ತಿರುಳು, ಉಪ್ಪಿನಕಾಯಿ, ದ್ವಿದಳ ಧಾನ್ಯಗಳಂತಹ ಕೃಷಿ ಉತ್ಪನ್ನಗಳಿಗೆ ಬ್ರಿಟನ್ನಿನ ಮಾರುಕಟ್ಟೆಗೆ ಸುಂಕರಹಿತವಾಗಿ ಪ್ರವೇಶ ಸಿಗಲಿದೆ. 

* ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಪೈಕಿ ಶೇ 95ಕ್ಕೂ ಹೆಚ್ಚಿನವುಗಳಿಗೆ ಶೂನ್ಯ ಸುಂಕ ಇರಲಿದೆ.

* ಸುಂಕ ರಹಿತ ಮಾರುಕಟ್ಟೆ ಲಭ್ಯವಾಗುವ ಕಾರಣದಿಂದಾಗಿ ಭಾರತದ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವು ಮುಂದಿನ ಮೂರು ವರ್ಷಗಳಲ್ಲಿ ಶೇ 20ಕ್ಕಿಂತ ಹೆಚ್ಚಳ ಕಾಣುವ ನಿರೀಕ್ಷೆ ಇದೆ.

* ಹಲಸಿನ ಹಣ್ಣು, ಸಿರಿಧಾನ್ಯಗಳು ಮತ್ತು ಸಾವಯವ ಔಷಧೀಯ ಗಿಡಮೂಲಿಕೆಗಳಿಗೆ ಹೊಸ ಮಾರುಕಟ್ಟೆ ಲಭ್ಯವಾಗಲಿದೆ.

* ಬ್ರಿಟನ್ನಿನಿಂದ ಆಮದು ಮಾಡಿಕೊಳ್ಳುವ ಹೈನು ಉತ್ಪನ್ನಗಳು, ಸೇಬು ಮತ್ತು ಓಟ್ಸ್‌, ಖಾದ್ಯ ತೈಲಗಳಿಗೆ ಭಾರತ ಸುಂಕ ವಿನಾಯಿತಿ ನೀಡಿಲ್ಲ.

* ಭಾರತದ ದ್ರಾಕ್ಷಿ, ಈರುಳ್ಳಿ, ಶೇಂಗಾ, ಹತ್ತಿ, ಬಾಸ್ಮತಿ ಅಕ್ಕಿ, ಸಂಬಾರ ಪದಾರ್ಥಗಳು, ತೋಟಗಾರಿಕಾ ಉತ್ಪನ್ನಗಳಿಗೆ ಒಪ್ಪಂದಿಂದಾಗಿ ಪ್ರಯೋಜನ ಆಗಲಿದೆ.

ಸಾಗರ ಉತ್ಪನ್ನಗಳು:

* ಭಾರತದ ಸಾಗರೋತ್ಪನ್ನಗಳಿಗೆ ಬ್ರಿಟನ್ನಿನಲ್ಲಿ ಸುಂಕ ಇರುವುದಿಲ್ಲ. ಇದರಿಂದಾಗಿ ಭಾರತದ ರಫ್ತುದಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. 

* ಭಾರತದಿಂದ ರಫ್ತಾಗುವ ಸೀಗಡಿಗೆ ಬ್ರಿಟನ್ನಿನಲ್ಲಿ ಈಗ ಶೇ 4.2ರಿಂದ ಶೇ 8.5ರವರೆಗೆ ತೆರಿಗೆ ಇದೆ. ಒಪ್ಪಂದ ಜಾರಿಗೆ ಬಂದ ನಂತರ ಇದು ಇರುವುದಿಲ್ಲ. ಹೀಗಾಗಿ, ಸೀಗಡಿ, ಕೇದರಮೀನು ರಫ್ತು ಹೆಚ್ಚುವ ನಿರೀಕ್ಷೆ ಇದೆ. 

ಕಾಫಿ, ಚಹಾ, ಸಂಬಾರ ಪದಾರ್ಥಗಳು:

* ಭಾರತದಿಂದ ರಫ್ತಾಗುವ ಕಾಫಿ, ಚಹಾ ಮತ್ತು ಸಂಬಾರ ಪದಾರ್ಥಗಳು ಬ್ರಿಟನ್ನಿಗೆ ಗಣನೀಯ ಪ್ರಮಾಣದಲ್ಲಿ ರವಾನೆ ಆಗುತ್ತವೆ. ಆದರೆ ಇನ್ನು ಮುಂದೆ ಈ ಉತ್ಪನ್ನಗಳಿಗೆ ಬ್ರಿಟನ್ನಿನಲ್ಲಿ ಸುಂಕ ಇರುವುದಿಲ್ಲವಾದ ಕಾರಣದಿಂದಾಗಿ ಇವುಗಳ ರಫ್ತು ಹೆಚ್ಚಲಿದೆ.

* ಇನ್‌ಸ್ಟಾಂಟ್‌ ಕಾಫಿ ಪುಡಿಗೆ ಸುಂಕ ಇಲ್ಲವಾಗುವುದರಿಂದ ಭಾರತದ ಉದ್ದಿಮೆಗಳು ಯುರೋಪಿನ ಇತರ ದೇಶಗಳ ಜೊತೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ.

ಜವಳಿ

* ಜವಳಿ ವಲಯದ ಒಟ್ಟು 1,143 ವರ್ಗದ ಉತ್ಪನ್ನಗಳು ಬ್ರಿಟನ್ನಿನ ಮಾರುಕಟ್ಟೆಯನ್ನು ಸುಂಕವಿಲ್ಲದೆ ಪ್ರವೇಶಿಸಬಹುದು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಕಾಂಬೋಡಿಯಾದ ಜವಳಿ ಉತ್ಪನ್ನಗಳಿಗೆ ಸುಂಕರಹಿತ ಪ್ರವೇಶ ಇದೆ. ಈಗ ಭಾರತದ ಈ ಉತ್ಪನ್ನಗಳು ಬ್ರಿಟನ್ನಿನ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕ ಆಗಲಿವೆ.

* ಸಿದ್ಧಪಡಿಸಿದ ಉಡುಪು, ಮನೆಗಳಲ್ಲಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವ ಬಟ್ಟೆಗಳು, ನೆಲಹಾಸುಗಳು ಮತ್ತು ಕರಕುಶಲ ವಸ್ತುಗಳು ಸುಂಕ ಇಲ್ಲವಾಗುವ ಕಾರಣಕ್ಕೆ ಹೆಚ್ಚು ಸ್ಪರ್ಧಾತ್ಮಕ ಆಗಲಿವೆ.

ಎಂಜಿನಿಯರಿಂಗ್

* ಹಲವು ಉತ್ಪನ್ನಗಳಿಗೆ ಸುಂಕ ಇಲ್ಲವಾಗಲಿದೆ. ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ರಫ್ತಾಗುವ ಎಂಜಿನಿಯರಿಂಗ್ ಉತ್ಪನ್ನಗಳ ಮೊತ್ತ ಐದು ವರ್ಷಗಳಲ್ಲಿ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಎಲೆಕ್ಟ್ರಿಕ್ ಯಂತ್ರೋಪಕರಣಗಳು, ವಾಹನ ಬಿಡಿಭಾಗಗಳು, ಕೈಗಾರಿಕಾ ಸಲಕರಣೆಗಳು, ನಿರ್ಮಾಣ ಕಾರ್ಯದಲ್ಲಿ ಬಳಸುವ ಯಂತ್ರೋಪಕರಣಗಳ ರಫ್ತು ಹೆಚ್ಚುವ ನಿರೀಕ್ಷೆ ಇದೆ.

ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಾಂಶ

* ಶೂನ್ಯ ಸುಂಕದ ಕಾರಣದಿಂದಾಗಿ ಭಾರತದ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತು ಹೆಚ್ಚಬಹುದು. ಭಾರತದ ಸ್ಮಾರ್ಟ್‌ಫೋನ್‌, ಇನ್ವರ್ಟರ್‌, ಆಪ್ಟಿಕಲ್ ಫೈಬರ್ ಕೇಬಲ್ ರಫ್ತು ಜಾಸ್ತಿ ಆಗಬಹುದು.

ಔಷಧ, ಆರೋಗ್ಯ ಸೇವೆ

* ಭಾರತದಿಂದ ರಫ್ತಾಗುವ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಉಪಕರಣಗಳು, ರೋಗಪತ್ತೆ ಸಾಧನಗಳು, ಇಸಿಜಿ ಯಂತ್ರಗಳು, ಎಕ್ಸ್‌ರೇ ಯಂತ್ರಗಳಿಗೆ ಸುಂಕ ಇರುವುದಿಲ್ಲ.

ಕ್ರೀಡೆ, ಆಟಿಕೆ

* ಸಾಕರ್ ಚೆಂಡು, ಕ್ರಿಕೆಟ್‌ ಪರಿಕರಗಳು, ರಗ್ಬಿ ಚೆಂಡು ಹಾಗೂ ಎಲೆಕ್ಟ್ರಾನಿಕ್ ಅಲ್ಲದ ಆಟಿಕೆಗಳ ರಫ್ತು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಚರ್ಮದ ಉತ್ಪನ್ನಗಳು

* ಭಾರತದ ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು ಶೂನ್ಯ ಸುಂಕದೊಡನೆ ಬ್ರಿಟನ್ ಪ್ರವೇಶಿಸಲಿವೆ.

ಸೇವಾ ವಲಯ

* ಬ್ರಿಟನ್ನಿನ ಗ್ರಾಹಕರಿಗಾಗಿ ನಿರ್ದಿಷ್ಟ ಕೆಲಸವೊಂದಕ್ಕಾಗಿ ತೆರಳುವವರಿಗೆ ಅನುಕೂಲ ಆಗಲಿದೆ. 

* ಯೋಗ ಶಿಕ್ಷಕರು, ಶಾಸ್ತ್ರೀಯ ಸಂಗೀತಗಾರರು, ನುರಿತ ಬಾಣಸಿಗರಿಗೆ ಬ್ರಿಟನ್ನಿನಲ್ಲಿ ಸೇವೆ ಒದಗಿಸುವುದು ಸುಲಭವಾಗಲಿದೆ.

ಇತರೆ

* ಭಾರತದ ಎಣ್ಣೆಕಾಳುಗಳಿಗೆ ಸುಂಕ ಕಡಿಮೆ ಆಗಲಿದೆ. ಇದರಿಂದಾಗಿ ಭಾರತದ ಎಣ್ಣೆಕಾಳುಗಳು ಬ್ರಿಟನ್ನಿನ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕ ಆಗುತ್ತವೆ. 

* ಪ್ಲಾಸ್ಟಿಕ್ಕಿನ ವಿವಿಧ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಬ್ರಿಟನ್ ಮಾರುಕಟ್ಟೆಯ ಪ್ರವೇಶ ಸಿಗಲಿದೆ.

* ಭಾರತದ ಮುತ್ತು ಮತ್ತು ಆಭರಣಗಳಿಗೆ ಸುಂಕದಲ್ಲಿ ವಿನಾಯಿತಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.