ನವದೆಹಲಿ: ದೇಶದಲ್ಲಿ ಉಪಗ್ರಹ ಆಧರಿತ ಇಂಟರ್‌ನೆಟ್ ಸೇವೆ ಒದಗಿಸಲು ಸ್ಟಾರ್‌ಲಿಂಕ್ ಕಂಪನಿಗೆ ಐದು ವರ್ಷವಷ್ಟೇ ಪರವಾನಗಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಕಂಪನಿಯು ಭಾರತಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ಟವರ್‌ರಹಿತ ಅತಿವೇಗದ ಇಂಟರ್‌ನೆಟ್ ಸೇವೆ ಒದಗಿಸುವಲ್ಲಿ ಈ ಕಂಪನಿಯು ಮುಂಚೂಣಿಯಲ್ಲಿದೆ.
20 ವರ್ಷದವರೆಗೆ ಪರವಾನಗಿ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ. ಆದರೆ, ಇದಕ್ಕೆ ಟ್ರಾಯ್‌ನಿಂದ ಅಸಮ್ಮತಿ ವ್ಯಕ್ತವಾಗಿದೆ ಎಂದು ಹೇಳಿವೆ.
ಭಾರತದಲ್ಲಿ ಸ್ಟಾರ್‌ಲಿಂಕ್‌ಗೆ ಎಷ್ಟು ವರ್ಷದವರೆಗೆ ಪರವಾನಗಿ ನೀಡಬೇಕು. ಇದಕ್ಕೆ ಹಂಚಿಕೆ ಮಾಡುವ ತರಂಗಾಂತರ ಬ್ಯಾಂಡ್‌ಗಳಿಗೆ ಎಷ್ಟು ಬೆಲೆ ನಿಗದಿಪಡಿಸಬೇಕು ಎಂಬ ಬಗ್ಗೆ ಆಡಳಿತಾತ್ಮಕವಾಗಿ ಶಿಫಾರಸು ಮಾಡಲು ಟ್ರಾಯ್ ಸಿದ್ಧತೆ ನಡೆಸಿದೆ.
ಸ್ಟಾರ್‌ಲಿಂಕ್‌ನ ಉಪಗ್ರಹ ಆಧರಿತ ಇಂಟರ್‌ನೆಟ್ ಸೇವೆ ಒದಗಿಸುವ ಸಂಬಂಧ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ನೊಂದಿಗೆ ಭಾರ್ತಿ ಏರ್‌ಟೆಲ್ ಮತ್ತು ಜಿಯೊ ಕಂಪನಿಯು ಒಪ್ಪಂದ ಮಾಡಿಕೊಂಡಿವೆ.
ಅಲ್ಲದೆ, ರಿಲಯನ್ಸ್ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಒದಗಿಸುವ ಉಪಕರಣಗಳ ಮರಾಟಕ್ಕೆ ಸಂಬಂಧಿಸಿದಂತೆ ಮಸ್ಕ್ ಮತ್ತು ಮುಕೇಶ್ ಅಂಬಾನಿ ನಡುವೆ ಒಪ್ಪಂದವಾಗಿದೆ ಎಂದು ಹೇಳಲಾಗಿದೆ. ಈ ಮೊದಲು ಉಪಗ್ರಹ ತರಂಗಾಂತರ ಹಂಚಿಕೆ ಕುರಿತು ಈ ಇಬ್ಬರ ನಡುವೆ ತಿಕ್ಕಾಟ ನಡೆದಿತ್ತು.
ದೇಶದಲ್ಲಿ ಕೈಗಟಕುವ ದರದಲ್ಲಿ ದೀರ್ಘಕಾಲದವರೆಗೆ ಇಂಟರ್‌ನೆಟ್ ಸೇವೆ ಒದಗಿಸಲು ಸ್ಟಾರ್‌ಲಿಂಕ್ ಮುಂದಾಗಿದೆ. ಇದಕ್ಕಾಗಿ ಎರಡು ದಶಕದವರೆಗೆ ಪರವಾನಗಿ ನೀಡುವಂತೆ ಕೋರಲು ಮುಂದಾಗಿದೆ. ಆದರೆ, ರಿಲಯನ್ಸ್ ಕಂಪನಿಯು ಮೂರು ವರ್ಷದವರೆಗೆ ನೀಡಬೇಕು. ಬಳಿಕ ಆ ಕಂಪನಿಯ ಸೇವೆಯನ್ನು ಮರುಮೌಲ್ಯಮಾಪನ ಮಾಡಬೇಕು ಎಂದು ಜಿಯೊ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮತ್ತೊಂದೆಡೆ ಭಾರ್ತಿ ಏರ್‌ಟೆಲ್ 3ರಿಂದ 5 ವರ್ಷ ಪರವಾನಗಿ ನೀಡುವಂತೆ ಮನವಿ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.
ಟ್ರಾಯ್ ನಿಲುವೇನು?:
‘ಐದು ವರ್ಷದವರೆಗಷ್ಟೇ ಪರವಾನಗಿ ನೀಡಲು ಟ್ರಾಯ್ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಈ ಅವಧಿಯ ಬಳಿಕ ಸ್ಟಾರ್‌ಲಿಂಕ್ ಮಾರುಕಟ್ಟೆಯ ಸ್ಥಿತಿಗತಿ ಅವಲೋಕಿಸಿ ಪರವಾನಗಿ ವಿಸ್ತರಣೆಗೆ ಮುಂದಿನ ಕ್ರಮವಹಿಸಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರ ಕೂಡ ಟ್ರಾಯ್ ಸೂಚಿಸಿದ ಅವಧಿವರೆಗೆ ಪರವಾನಗಿ ನೀಡಲಿದೆ. ಬಳಿಕ ತರಂಗಾಂತರ ಹಂಚಿಕೆಯ ದರ ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಟ್ರಾಯ್ ಒಂದು ತಿಂಗಳೊಳಗೆ ಶಿಫಾರಸು ಸಿದ್ಧಪಡಿಸಿ ಸಲ್ಲಿಸಲಿದೆ. ಈ ಬಗ್ಗೆ ಕೇಂದ್ರ ಟೆಲಿಕಾಂ ಸಚಿವಾಲಯವು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಜಿಯೊ ಆತಂಕ ಏನು?
ಮುಕೇಶ್ ಅಂಬಾನಿ ಒಡೆತನದ ಜಿಯೊ ಟೆಲಿಕಾಂ ಕಂಪನಿಯು ತರಂಗಾಂತರ ಖರೀದಿಗಾಗಿ ₹1.65 ಲಕ್ಷ ಕೋಟಿ ವೆಚ್ಚ ಮಾಡಿದೆ. ದೇಶದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭಗೊಂಡರೆ ತನ್ನ ಬ್ರ್ಯಾಂಡ್‌ಬಾಂಡ್ ಚಂದಾದಾರರನ್ನು ಕಳೆದುಕೊಳ್ಳುವ ಆತಂಕ ಅದಕ್ಕಿದೆ ಎಂದು ಹೇಳಿವೆ. ಜಾಗತಿಕ ವೃತ್ತಿಪರ ಸೇವಾ ನೆಟ್‌ವರ್ಕ್ಸ್ ಕಂಪನಿಯಾದ ಕೆಪಿಎಂಜಿ ಅಂದಾಜಿನ ಪ್ರಕಾರ 2028ರ ವೇಳೆಗೆ ಭಾರತದ ಉಪಗ್ರಹ ಸಂವಹನ ವಲಯದ ಬೆಳವಣಿಗೆಯು 10 ಪಟ್ಟು ಏರಿಕೆಯಾಗಲಿದೆ. ಇದರ ಮಾರುಕಟ್ಟೆ ಮೌಲ್ಯವು ₹2.17 ಲಕ್ಷ ಕೋಟಿಗೆ ತಲುಪಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.