ನವದೆಹಲಿ: ವ್ಯಾಪಾರದ ನಿರ್ಬಂಧಗಳ ಉಲ್ಲಂಘನೆ ಮೂಲಕ ಪ್ರತಿ ವರ್ಷ ಭಾರತದಲ್ಲಿ ತಯಾರಾಗುವ ₹85 ಸಾವಿರ ಕೋಟಿ ಮೌಲ್ಯದ ಸರಕುಗಳು ದುಬೈ, ಸಿಂಗಪುರ ಮತ್ತು ಕೊಲಂಬೊ ಬಂದರುಗಳ ಮೂಲಕ ಪಾಕಿಸ್ತಾನಕ್ಕೆ ರವಾನೆಯಾಗುತ್ತವೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಅಂದಾಜಿಸಿದೆ.
ಭಾರತದಲ್ಲಿರುವ ಕಂಪನಿಗಳು ಈ ಬಂದರುಗಳಿಗೆ ಸರಕುಗಳನ್ನು ಪೂರೈಸುತ್ತವೆ. ಇವುಗಳನ್ನು ಅಲ್ಲಿನ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತದೆ. ಸಾಗಣೆ ವೇಳೆ ಈ ಸರಕುಗಳಿಗೆ ಸುಂಕ ಪಾವತಿಸದೆ ಗೋದಾಮುಗಳಲ್ಲಿ ಸಂಗ್ರಹಿಸಬಹುದಾಗಿದೆ ಎಂದು ಹೇಳಿದೆ.
‘ಈ ಗೋದಾಮುಗಳಲ್ಲಿ ಸರಕುಗಳ ಲೇಬಲ್ ಮತ್ತು ದಾಖಲೆಗಳನ್ನು ರಫ್ತು ಮಾಡುವ ದೇಶಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ. ಉದಾಹರಣೆಗೆ ಭಾರತದ ಸರಕುಗಳ ಮೇಲೆ ‘ಮೇಡ್ ಇನ್ ಯುಎಇ’ ಎಂದು ಲೇಬಲ್ ಅಂಟಿಸುವ ಸಾಧ್ಯತೆಯಿದೆ. ಆ ಬಳಿಕ ಪಾಕಿಸ್ತಾನಕ್ಕೆ ರವಾನಿಸಲಾಗುತ್ತದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತವು ನೇರವಾಗಿ ಪಾಕಿಸ್ತಾನದ ಜತೆಗೆ ವ್ಯಾಪಾರ ನಡೆಸುವುದಿಲ್ಲ. ಆದರೆ, ಪರೋಕ್ಷವಾಗಿ ಸರಕುಗಳು ರವಾನೆಯಾಗುತ್ತಿವೆ ಎಂದು ತಿಳಿಸಿದ್ದಾರೆ.
ಈ ವಿಧಾನವು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಕಂಪನಿಗಳಿಗೆ ನೆರವಾಗಿದೆ. ಅಲ್ಲದೆ, ಈ ಮಾರ್ಗದ ಮೂಲಕ ರವಾನಿಸುವ ಸರಕುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರವು ಹಲವು ನಿರ್ಬಂಧಗಳನ್ನು ಹೇರಿದೆ. ಈ ಪೈಕಿ ಅಟ್ಟಾರಿ ಗಡಿ ಬಂದ್ ಕೂಡ ಸೇರಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಭಾರತದ ಜತೆಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.