ಮುಂಬೈ: ಮಲೇಷ್ಯಾದಲ್ಲಿ ಕಳೆದ ನಾಲ್ಕು ವಾರದಲ್ಲಿ ತಾಳೆ ಎಣ್ಣೆ ಬೆಲೆಯು ಶೇ 11ರಷ್ಟು ಏರಿಕೆಯಾಗಿದೆ. ಹಾಗಾಗಿ, ಭಾರತಕ್ಕೆ ಆಮದು ಮಾಡಿಕೊಳ್ಳಲು ಪೂರ್ವ ನಿಗದಿಯಾಗಿದ್ದ 70 ಸಾವಿರ ಟನ್‌ನಷ್ಟು ಕಚ್ಚಾ ತಾಳೆ ಎಣ್ಣೆಯನ್ನು ಇಲ್ಲಿನ ಸಂಸ್ಕರಣಾಗಾರರು ರದ್ದುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಡುಗೆ ಮನೆಯಲ್ಲಿ ಖಾದ್ಯಗಳ ತಯಾರಿಕೆಗೆ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ.
ಭಾರತವು ಅತಿಹೆಚ್ಚು ಪ್ರಮಾಣದಲ್ಲಿ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ದೇಶವಾಗಿದೆ. ಬೆಲೆ ಏರಿಕೆಯಿಂದಾಗಿ ಗುರುವಾರದಂದು ಮಲೇಷ್ಯಾದಿಂದ ಪೂರೈಕೆಯಾಗಬೇಕಿದ್ದ 40 ಸಾವಿರ ಟನ್‌ನಷ್ಟು ಎಣ್ಣೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿವೆ.
‘ಖರೀದಿದಾರರು ಮತ್ತು ಮಾರಾಟಗಾರರು ಪರಸ್ಪರ ಸಮ್ಮತಿಯ ಮೇರೆಗೆ ರದ್ದುಪಡಿಸಿದ್ದಾರೆ’ ಎಂದು ಹೇಳಿವೆ.
ತಾಳೆ ಎಣ್ಣೆ ಬೆಲೆ ಏರಿಕೆಯಾಗಿರುವುದರಿಂದ ಸಂಸ್ಕರಣಾಗಾರರ ಚಿತ್ತವು ಕಡಿಮೆ ದರದಲ್ಲಿ ಲಭಿಸುವ ಸೋಯಾ ಎಣ್ಣೆಯತ್ತ ಹೊರಳಬಹುದು ಎಂದು ಹೇಳಿವೆ.
‘ಕಚ್ಚಾ ಎಣ್ಣೆಯನ್ನು ಸಂಸ್ಕರಿಸಿ ಪೂರೈಕೆದಾರರಿಗೆ ನೀಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ವೆಚ್ಚವಾಗಲಿದೆ. ಇದರಿಂದ ನಮಗೆ ಲಾಭ ದಕ್ಕುವುದಿಲ್ಲ. ಹಾಗಾಗಿ, ಮಾರ್ಚ್ ತಿಂಗಳಿಗೆ ನಿಗದಿಯಾಗಿದ್ದ ಎಣ್ಣೆ ತರಿಸಿಕೊಳ್ಳುವುದನ್ನು ರದ್ದುಪಡಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲ್ಲಿನ ಪ್ರಮುಖ ಖರೀದಿದಾರರೊಬ್ಬರು ಹೇಳಿದ್ದಾರೆ.
ತಾಳೆ ಎಣ್ಣೆಯ ತ್ವರಿತ ಸಾಗಣೆಗೆ ಅವಕಾಶ ಇರುವುದರಿಂದ ಖರೀದಿದಾರರು ಇದನ್ನು ಆಮದು ಮಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಾರೆ. ಆದರೆ, ಬೆಲೆ ಏರಿಕೆಯಾಗಿರುವುದೇ ಅವರು ಹಿಂದಡಿ ಇಡಲು ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
‘ತಾಳೆ ಎಣ್ಣೆಗೆ ಹೋಲಿಸಿದರೆ ಫೆಬ್ರುವರಿ ಮತ್ತು ಮಾರ್ಚ್‌ಗೆ ಆಮದು ಮಾಡಿಕೊಳ್ಳಬೇಕಿರುವ ಸೋಯಾ ಎಣ್ಣೆ ಬೆಲೆಯು ಕಡಿಮೆಯಿದೆ. ಹಾಗಾಗಿ, ಕೆಲವು ಸಂಸ್ಕರಣಾಗಾರರು ಸೋಯಾದತ್ತ ಹೊರಳಿದ್ದಾರೆ’ ಎಂದು ಸಸ್ಯಜನ್ಯ ತೈಲ ಮಾರಾಟದ ಕಮಿಷನ್ ಸಂಸ್ಥೆಯಾದ ಸನ್‌ವಿನ್ ಸಮೂಹದ ಮುಖ್ಯ ಕಾರ್ಯ ನಿರ್ವಾಹಕ ಸಂದೀಪ್ ಬಜೋರಿಯಾ ಹೇಳಿದ್ದಾರೆ.
ಕಳೆದ ತಿಂಗಳು ಪ್ರತಿ ಟನ್ ಕಚ್ಚಾ ತಾಳೆ ಎಣ್ಣೆ ದರವು ₹97 ಸಾವಿರ ಇತ್ತು. ಮಾರ್ಚ್ ತಿಂಗಳಿಗೆ ಪೂರೈಕೆಯಾಗುವ ಎಣ್ಣೆಯ ದರವು ₹1.04 ಲಕ್ಷಕ್ಕೆ ಮುಟ್ಟಿದೆ.
ಸುಂಕ ಹೆಚ್ಚಳಕ್ಕೆ ನಿರ್ಧಾರ?
ಕೇಂದ್ರ ಸರ್ಕಾರವು ಸ್ಥಳೀಯ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಳೆ ಎಣ್ಣೆ ಆಮದು ಸುಂಕ ಏರಿಕೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ದಾಸ್ತಾನಿಟ್ಟಿರುವ ಎಣ್ಣೆಯನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಸಂಸ್ಕರಣಾಗಾರರು ಮುಂದಾಗಿದ್ದಾರೆ. ಹಾಗಾಗಿ ಖರೀದಿ ಒಪ್ಪಂದವನ್ನು ರದ್ದುಪಡಿಸಿದ್ದಾರೆ ಎಂದು ದೆಹಲಿ ಮೂಲದ ಡೀಲರ್‌ವೊಬ್ಬರು ಹೇಳಿದ್ದಾರೆ. ಭಾರತವು ಪ್ರಮುಖವಾಗಿ ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಜನವರಿಯಲ್ಲಿ 2.75 ಟನ್‌ನಷ್ಟು ಆಮದು ಮಾಡಿಕೊಂಡಿದೆ. ಇದು 14 ವರ್ಷಗಳ ಕನಿಷ್ಠ ಮಟ್ಟವಾಗಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಿಂದ ಸೋಯಾ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.