ADVERTISEMENT

ಭಾರತದ ಏಪ್ರಿಲ್‌ ಚಿನ್ನದ ಆಮದು ಶೇ 99.9 ಕುಸಿತ; 30 ವರ್ಷಗಳ ಕಡಿಮೆ ಮಟ್ಟ

ಏಜೆನ್ಸೀಸ್
Published 5 ಮೇ 2020, 9:08 IST
Last Updated 5 ಮೇ 2020, 9:08 IST
ಚಿನ್ನದ ಗಟ್ಟಿ– ಸಾಂಕೇತಿಕ ಚಿತ್ರ
ಚಿನ್ನದ ಗಟ್ಟಿ– ಸಾಂಕೇತಿಕ ಚಿತ್ರ   

ನವದೆಹಲಿ: ಭಾರತ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣ ಕಳೆದ 30 ವರ್ಷಗಳಲ್ಲಿಯೇ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಕೊರೊನಾ ವೈರಸ್‌ ಸೋಂಕು ನಿಯಂತ್ರಕ್ಕಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವಿಮಾನ ಪ್ರಯಾಣ ನಿರ್ಬಂಧ ಹಾಗೂ ಆಭರಣ ಮಳಿಗೆಗಳು ತೆರೆದಿರದ ಕಾರಣ ಭೌತಿಕ ಚಿನ್ನದ ಖರೀದಿಯೂ ಆಗಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಏಪ್ರಿಲ್‌ನಲ್ಲಿ ಚಿನ್ನದ ಆಮದು ಪ್ರಮಾಣ ಶೇ 99.9ರಷ್ಟು ಇಳಿಕೆಯಾಗಿದೆ.

ಜಗತ್ತಿನದಲ್ಲಿ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ಎರಡನೇ ರಾಷ್ಟ್ರವಾಗಿರುವ ಭಾರತ ಏಪ್ರಿಲ್‌ನಲ್ಲಿ ಸುಮಾರು 50 ಕೆ.ಜಿ.ಯಷ್ಟು ಬಂಗಾರ ಗಟ್ಟಿಯನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 110.18 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು ಎಂದು ರಾಯಿಟರ್ಸ್‌ ವರದಿ ಮಾಡಿದೆ.

ADVERTISEMENT

ಚಿನ್ನದ ಮೌಲ್ಯದ ಲೆಕ್ಕಾಚಾರದಲ್ಲಿ ಕಳೆದ ವರ್ಷ ಏಪ್ರಿಲ್‌ಗೆ ಹೋಲಿಸಿದರೆ, ಆಮದು ಮೌಲ್ಯ 397 ಕೋಟಿ ಡಾಲರ್‌ನಿಂದ 28.4 ಲಕ್ಷ ಡಾಲರ್‌ಗೆ ಇಳಿದಿದೆ.

ಭಾರತಕ್ಕೆ ಹೊರ ರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದು ಆಗುವುದು ವಾಯು ಮಾರ್ಗದಲ್ಲಿ. ಲಾಕ್‌ಡೌನ್‌ನಿಂದ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಆಮದು ಪ್ರಕ್ರಿಯೆ ನಡೆದಿಲ್ಲ. ಅಖಿಲ ಭಾರತೀಯ ಹರಳು ಮತ್ತು ಚಿನ್ನಾಭರಣ ಪ್ರಾದೇಶಿಕ ಮಂಡಳಿಯ ಅಧ್ಯಕ್ಷ ಎನ್‌.ಅನಂತ ಪದ್ಮನಾಭನ್‌ ಪ್ರಕಾರ, ಈ ವರ್ಷ 350 ಟನ್‌ ಚಿನ್ನ ಆಮದು ಆಗಲಿದೆ.

ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಫ್ಯೂಚರ್ಸ್‌ಗಳು ಮಂಗಳವಾರ 10 ಗ್ರಾಂಗೆ ಶೇ 0.71ರಷ್ಟು ಕಡಿಮೆಯಾಗಿ ₹45,480 ತಲುಪಿದೆ. ಸೋಮವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ಫ್ಯೂಚರ್ಸ್‌ ₹45,807ರಲ್ಲಿ ವಹಿವಾಟು ಮುಕ್ತಾಯವಾಗಿತ್ತು. ಬೆಳ್ಳಿಯ ಫ್ಯೂಚರ್ಸ್‌ ಪ್ರತಿ ಕೆಜಿಗೆ ಶೇ 0.24ರಷ್ಟು ಕಡಿಮೆಯಾಗಿ ₹41,143 ತಲುಪಿದೆ.

ಅಮೆರಿಕ–ಚೀನಾ ನಡುವಿನ ವಾಣಿಜ್ಯ ಬಿಕ್ಕಟ್ಟು ತೀವ್ರವಾದ ಕಾರಣದಿಂದ ಕಳೆದ ವರ್ಷ ಸುರಕ್ಷಿತ ಹೂಡಿಕೆಯಾದ ಚಿನ್ನಕ್ಕೆ ಬೇಡಿಕೆ ಉಂಟಾಗಿ, ದರ ಶೇ 18ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.