ಚಿನ್ನ
ನವದೆಹಲಿ: ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ಚಿನ್ನದ ಬೇಡಿಕೆ ಪ್ರಮಾಣ ಕುಸಿದಿದೆ. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ಒಟ್ಟು ಬೇಡಿಕೆ 118.1 ಟನ್ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಬುಧವಾರ ತಿಳಿಸಿದೆ.
ಈ ಬೇಡಿಕೆಯು ಮೌಲ್ಯದ ಲೆಕ್ಕದಲ್ಲಿ ₹94,030 ಕೋಟಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 22ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.
ಪ್ರಸಕ್ತ ವರ್ಷದಲ್ಲಿ ಭಾರತದ ಚಿನ್ನದ ಬೇಡಿಕೆಯು 700ರಿಂದ 800 ಟನ್ ಆಗಿದೆ ಎಂದು ಅಂದಾಜಿಸಿದೆ.
ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. 10 ಗ್ರಾಂ ದರವು ₹1 ಲಕ್ಷ ಹತ್ತಿರದಲ್ಲಿದೆ. ಇದು ಗ್ರಾಹಕರ ಖರೀದಿ ಉತ್ಸಾಹವನ್ನು ಕುಗ್ಗಿಸಿದೆ ಎಂದು ಚಿನಿವಾರ ಪೇಟೆ ತಜ್ಞರು ಹೇಳಿದ್ದಾರೆ.
‘ದರ ಏರಿಕೆಯು ಖರೀದಿಗೆ ಮೇಲೆ ಪರಿಣಾಮ ಬೀರಿದೆ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ವಿಶಿಷ್ಟ ಸ್ಥಾನವಿದೆ. ಅಕ್ಷಯ ತೃತೀಯ ಹಾಗೂ ಮದುವೆ ಋತುವಿನಲ್ಲಿ ಗ್ರಾಹಕರಿಂದ ಹಳದಿ ಲೋಹ ಖರೀದಿ ಹೆಚ್ಚಳವಾಗಲಿದೆ’ ಎಂದು ಸಮಿತಿಯ ಭಾರತದ ಸಿಇಒ ಸಚಿನ್ ಜೈನ್ ಹೇಳಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರು ಸಣ್ಣ ಗಾತ್ರದ ಮತ್ತು ಹಗುರ ಆಭರಣಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಬಹುದು. ಮುಂಬರುವ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕೆಲವರು ಖರೀದಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಹೂಡಿಕೆ ಹೆಚ್ಚಳ: ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಶೇ 7ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 43.6 ಟನ್ ಇದ್ದಿದ್ದು, 46.7 ಟನ್‌ಗೆ ಹೆಚ್ಚಳವಾಗಿದೆ ಎಂದು ಡಬ್ಲ್ಯುಜಿಸಿ ತಿಳಿಸಿದೆ.
ಚಿನ್ನಾಭರಣ ಬೇಡಿಕೆಯಲ್ಲೂ ಶೇ 25ರಷ್ಟು ಕುಸಿತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 95.5 ಟನ್ ಬೇಡಿಕೆ ಇತ್ತು. ಈ ತ್ರೈಮಾಸಿಕದಲ್ಲಿ 71.4 ಟನ್‌ಗೆ ತಗ್ಗಿದೆ. ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ.
ಷೇರುಪೇಟೆಯಲ್ಲಿನ ಅನಿಶ್ಚಿತ ಸ್ಥಿತಿಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಖರೀದಿಗೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.