ADVERTISEMENT

ಐಪಿಒಗೆ ಅರ್ಜಿ ಸಲ್ಲಿಸಿದ ಎಲ್‌ಐಸಿ

ಬಂಡವಾಳ ಹಿಂತೆಗೆತದ ಗುರಿ ತಲುಪಲು ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 16:29 IST
Last Updated 13 ಫೆಬ್ರುವರಿ 2022, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ರಾಯಿಟರ್ಸ್/‍ಪಿಟಿಐ): ಕೇಂದ್ರ ಸರ್ಕಾರದ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಅನುಮತಿ ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಅರ್ಜಿ ಸಲ್ಲಿಸಿದೆ.

ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿಯನ್ನು ತಲುಪಲು ಈ ಐಪಿಒ ಮಹತ್ವದ್ದು. ಭಾನುವಾರ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಇರುವ ಮಾಹಿತಿ ಪ್ರಕಾರ ಎಲ್‌ಐಸಿ 31.62 ಕೋಟಿ ಷೇರುಗಳನ್ನು (ಅಂದರೆ, ಸರಿಸುಮಾರು ಶೇಕಡ 5ರಷ್ಟು ಷೇರುಗಳನ್ನು) ಮಾರಾಟ ಮಾಡಲಿದೆ.

ಎಲ್‌ಐಸಿಯ ಇಂದಿನ ಆಸ್ತಿಗಳು ಹಾಗೂ ಭವಿಷ್ಯದ ಲಾಭದ ಒಟ್ಟು ಮೌಲ್ಯವು ₹ 5.39 ಲಕ್ಷ ಕೋಟಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಎಲ್‌ಐಸಿ ಐಪಿಒ ಬರುತ್ತಿದೆ.‌

ADVERTISEMENT

ಎಲ್‌ಐಸಿಯು ಒಟ್ಟು 28.30 ಕೋಟಿ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಿದೆ. 13.5 ಲಕ್ಷ ಏಜೆಂಟರನ್ನು ಕಂಪನಿ ಹೊಂದಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ. ಎಲ್‌ಐಸಿಯ ಮಾರುಕಟ್ಟೆ ಮೌಲ್ಯದ ಅಂದಾಜನ್ನು ಸರ್ಕಾರವು ಅರ್ಜಿಯಲ್ಲಿ ತಿಳಿಸಿಲ್ಲ.

ಐಪಿಒ ಸಂದರ್ಭದಲ್ಲಿ ಎಲ್ಐಸಿ ವಿಮೆ ಹೊಂದಿರುವವರಿಗೆ ಎಷ್ಟು ವಿನಾಯಿತಿ ನೀಡಲಾಗುತ್ತದೆ ಎಂಬುದನ್ನು ಕೂಡ ಸರ್ಕಾರ ತಿಳಿಸಿಲ್ಲ. ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರಿಗೆ ಕೂಡ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರವು ಆಲೋಚನೆ ನಡೆಸಿದೆ.

ಎಲ್‌ಐಸಿಯು ಒಂದು ನಿಗಮ ಎಂದು ನೋಂದಣಿ ಆಗಿರುವ ಕಾರಣ, ಇದರಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಬೇಕು ಎಂದಾದರೆ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್‌ಐಸಿ 1.05 ಲಕ್ಷಕ್ಕಿಂತ ಹೆಚ್ಚು ನೌಕರರನ್ನು ಹೊಂದಿದೆ. ₹ 33.90 ಲಕ್ಷ ಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಎಲ್‌ಐಸಿ ನಿರ್ವಹಣೆ ಮಾಡುತ್ತಿದೆ.

ಎಲ್‌ಐಸಿ ಐಪಿಒ ಮೂಲಕ ಸಂಗ್ರಹ ಆಗಲಿರುವ ಬಂಡವಾಳದ ಮೊತ್ತವು ಹಿಂದಿನ ವರ್ಷದಲ್ಲಿ ನಡೆದ ಪೇಟಿಎಂ ಐಪಿಒಕ್ಕಿಂತ ದೊಡ್ಡದಾಗಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.