ADVERTISEMENT

2023–24ರಲ್ಲಿ ಔಷಧ ಉತ್ಪನ್ನ ರಫ್ತು ಹೆಚ್ಚಳ

ಪಿಟಿಐ
Published 24 ಏಪ್ರಿಲ್ 2024, 13:57 IST
Last Updated 24 ಏಪ್ರಿಲ್ 2024, 13:57 IST
   

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ಒಟ್ಟು ₹2.32 ಲಕ್ಷ ಕೋಟಿ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.

2022–23ರಲ್ಲಿ ₹2.11 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 9.67ರಷ್ಟು ಹೆಚ್ಚಳವಾಗಿದೆ. ಮಾರ್ಚ್‌ನಲ್ಲಿ ರಫ್ತು ಪ್ರಮಾಣವು ಶೇ 12ರಷ್ಟು ಏರಿಕೆಯಾಗಿದ್ದು, ₹23,324 ಕೋಟಿ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

ಭಾರತದಿಂದ ಪ್ರಮುಖವಾಗಿ ಅಮೆರಿಕ, ಬ್ರಿಟನ್‌, ನೆದರ್ಲೆಂಡ್ಸ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ಉತ್ಪನ್ನಗಳು ರಫ್ತಾಗುತ್ತವೆ. ಈ ಪೈಕಿ ಅಮೆರಿಕಕ್ಕೆ ಶೇ 31ರಷ್ಟು ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. ನಂತರದ ಸ್ಥಾನದಲ್ಲಿ ಬ್ರಿಟನ್‌ ಮತ್ತು ನೆದರ್ಲೆಂಡ್ಸ್‌ ಇವೆ ಎಂದು ವಿವರಿಸಿದೆ. 

ADVERTISEMENT

ಹಿಂದಿನ ಆರ್ಥಿಕ ವರ್ಷದಲ್ಲಿ ಮಾಂಟೆನಿಗ್ರೊ, ದಕ್ಷಿಣ ಸುಡಾನ್‌, ಚಾಡ್‌, ಕಮರೊಸ್, ಲಾಟ್ವಿಯಾ, ಐರ್ಲೆಂಡ್, ಸ್ವೀಡನ್‌, ಹೈಟಿ ಮತ್ತು ಇಥಿಯೋಪಿಯಾ ಈ ರಫ್ತು ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿವೆ.

ದೇಶದಲ್ಲಿ 2022–23ರಲ್ಲಿ ಔಷಧ ಉತ್ಪನ್ನಗಳ ವ್ಯಾಪಾರವು ₹4.16 ಲಕ್ಷ ಕೋಟಿ ಆಗಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ 2030ರ ವೇಳೆಗೆ ದೇಶದಲ್ಲಿ ಈ ವ್ಯಾಪಾರವು ₹10 ಲಕ್ಷ ಕೋಟಿ ದಾಟಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. 

ದೇಶದ ಔಷಧ ಉತ್ಪನ್ನಗಳ ರಫ್ತು ಮೌಲ್ಯವು ಮಾಸಿಕ ಸರಾಸರಿ ₹25 ಸಾವಿರ ಕೋಟಿ ಇದೆ. ಜಗತ್ತಿನಲ್ಲಿ ಭಾರತವು ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು, 60 ಸಾವಿರಕ್ಕೂ ಹೆಚ್ಚು ಜೆನರಿಕ್‌ ಔಷಧಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ದೇಶದಲ್ಲಿ ಔಷಧ ಉತ್ಪನ್ನಗಳ ಕೈಗಾರಿಕೆಯು ಮೂರನೇ ಅತಿದೊಡ್ಡ ವಲಯವಾಗಿದೆ. ಜಾಗತಿಕ ಮಟ್ಟದಲ್ಲಿ ಏಳನೇ ಸ್ಥಾನ ಪಡೆದಿದೆ.  

ದೇಶೀಯವಾಗಿ ಔಷಧ ತಯಾರಿಕೆ ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಉತ್ಪನ್ನ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಮೂಲಕ ಅಗತ್ಯ ಔಷಧಗಳು ಮತ್ತು ಜೆನರಿಕ್‌ ಔಷಧಗಳ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.