ADVERTISEMENT

ಹಣದುಬ್ಬರ | UPA ಸರ್ಕಾರದಲ್ಲಿ ಶೇ 8.1; ಮೋದಿ ಸರ್ಕಾರದಲ್ಲಿ ಶೇ 5.1: ಬಿಜೆಪಿ

ಪಿಟಿಐ
Published 15 ಜುಲೈ 2025, 6:06 IST
Last Updated 15 ಜುಲೈ 2025, 6:06 IST
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ   

ನವದೆಹಲಿ: ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರವು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಶೇ 2.1ರಷ್ಟು ದಾಖಲಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಣದುಬ್ಬರ ಪ್ರಮಾಣ ಶೇ 8.1ರಷ್ಟಿತ್ತು. ಮೋದಿ ಸರ್ಕಾರದ ಉತ್ತಮ ನಿರ್ವಹಣೆಯಿಂದ ಸರಾಸರಿ ಹಣದುಬ್ಬವು ಶೇ 5.1ಕ್ಕೆ ಕುಸಿದಿದೆ ಎಂದು ಬಿಜೆಪಿ ಮಂಗಳವಾರ ಹೇಳಿದೆ.

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

‘2012ರ ಜನವರಿಯಿಂದ 2014ರ ಏಪ್ರಿಲ್‌ವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಈ ಅವಧಿಯ 28 ತಿಂಗಳಲ್ಲಿ 22 ತಿಂಗಳ ಹಣದುಬ್ಬರವು ಶೇ 9ರಷ್ಟಿತ್ತು. ಇದು ನಿಜಕ್ಕೂ ಆಘಾತಕಾರಿ. ಈ ಅವಧಿಯಲ್ಲಿ ಕೆಲವೊಮ್ಮೆ ಎರಡಂಕಿ ದಾಟಿದ್ದೂ ಇದೆ’ ಎಂದಿದ್ದಾರೆ.

ADVERTISEMENT

‘ಇದಕ್ಕೆ ತದ್ವಿರುದ್ಧವಾಗಿ ಮೋದಿ ಸರ್ಕಾರವು ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರ ಪ್ರಮಾಣವನ್ನು ಶೇ 5ರೊಳಗೆ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಶೇ 8ರ ಮೇಲೆ ಹೋಗಲು ಎಂದೂ ಬಿಟ್ಟಿಲ್ಲ’ ಎಂದಿದ್ದಾರೆ.

‘ಯುಪಿಎ ಸರ್ಕಾರದ ಕೊನೆಯ ಮೂರು ವರ್ಷಗಳಲ್ಲಿ ಹಣದುಬ್ಬರವು ಶೇ 9.8ಕ್ಕೆ ಏರಿತ್ತು. ಜಗತ್ತಿನ ಹಣದುಬ್ಬರ ಪ್ರಮಾಣವು ಶೇ 4ರಿಂದ 5ರ ಆಸುಪಾಸಿನಲ್ಲಿದ್ದಾಗಲೂ ಭಾರತವು ದುಬಾರಿ ಬೆಲೆಗೆ ತತ್ತರಿಸಿತ್ತು’ ಎಂದು ಮಾಳವೀಯ ಹೇಳಿದ್ದಾರೆ.

ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ (NSO) ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಪ್ರತಿ ವರ್ಷದ ಹಣದುಬ್ಬರ ಪ್ರಮಾಣವನ್ನು ವಿವರಿಸಿದೆ. 2024ರ ಜೂನ್‌ನಿಂದ 2025ರ ಜೂನ್‌ವರೆಗೆ ಹಣದುಬ್ಬರವು 2.1ರಷ್ಟಿದೆ. ಇದು ಕಳೆದ ಆರು ವರ್ಷಗಳ ಕನಿಷ್ಠಕ್ಕೆ ಇಳಿದಿದೆ. ಮುಂಗಾರು ಆಧರಿಸಿ ಮಾರುಕಟ್ಟೆಗೆ ಪ್ರವೇಶಿಸುವ ಆಹಾರ ಪದಾರ್ಥ, ತರಕಾರಿ ಬೆಲೆ ಆಧರಿಸಿ ಚಿಲ್ಲರೆ ಹಣದುಬ್ಬರ ಪ್ರಮಾಣ ನಿರ್ಧರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.