ADVERTISEMENT

ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌

ಪರಿಣಾಮ ಬೀರದ ತೆರಿಗೆ ಲೆಕ್ಕಾಚಾರ ಬದಲಾವಣೆ

ವಿಶ್ವನಾಥ ಎಸ್.
Published 28 ಸೆಪ್ಟೆಂಬರ್ 2023, 0:03 IST
Last Updated 28 ಸೆಪ್ಟೆಂಬರ್ 2023, 0:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಡೆಟ್‌ ಮ್ಯೂಚುವಲ್‌ ಫಂಡ್‌ಗಳಿಂದ ಸಿಗುವ ಲಾಭದ ತೆರಿಗೆ ಲೆಕ್ಕಾಚಾರದಲ್ಲಿ ಮಾಡಿರುವ ಬದಲಾವಣೆಯಿಂದ ಹೂಡಿಕೆ ಮೇಲೆ ಯಾವುದೇ  ಪ್ರತಿಕೂಲ ಪರಿಣಾಮ ಬೀರಿಲ್ಲ. ಡೆಟ್‌ ಫಂಡ್‌ಗಳಲ್ಲಿ ಬಂಡವಾಳ ಒಳಹರಿವು ಹೆಚ್ಚಾಗುತ್ತಲೇ ಇದೆ. 

ತೆರಿಗೆ ಪ್ರಯೋಜನಗಳನ್ನು ಕೈಬಿಟ್ಟ ಮೊದಲ ತಿಂಗಳಿನಲ್ಲಿ (ಏಪ್ರಿಲ್‌) ಡೆಟ್‌ ಫಂಡ್‌ಗಳಲ್ಲಿ ₹1.05 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದ್ದು, ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ಅದಾಗಿದೆ. 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಒಟ್ಟು ಹೂಡಿಕೆಯು ₹1.66 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಆಗಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಹೂಡಿಕೆ ತಜ್ಞ ಶ್ರೀರಾಮ್‌ ಬಿ.ಕೆ.ಆರ್‌. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

 2022–23ನೇ ಹಣಕಾಸು ವರ್ಷದ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಡೆಟ್‌ ಫಂಡ್‌ಗಳಿಂದ ₹48,992 ಕೋಟಿ ಬಂಡವಾಳ ಹಿಂತೆಗೆತ ಆಗಿತ್ತು ಎಂದು ಅವರು ತಿಳಿಸಿದರು.

ADVERTISEMENT

ಡ್ಯುರೇಷನ್‌ ಫಂಡ್‌ಗಳಲ್ಲಿ ಲಿಕ್ವಿಡ್‌ ಫಂಡ್‌ ₹1.05 ಲಕ್ಷ ಕೋಟಿ ಹೂಡಿಕೆ ಆಗಿದ್ದು, ಹಿಂದಿನ ಅವಧಿಗೆ ಹೋಲಿಸಿದರೆ 1.8  ಪಟ್ಟು ಏರಿಕೆ ಕಂಡುಬಂದಿದೆ. ಮನಿ ಮಾರ್ಕೆಟ್ ಫಂಡ್‌ನಲ್ಲಿ ₹38,219 ಕೋಟಿ ಹೂಡಿಕೆ ಆಗಿದ್ದು ಹಿಂದಿನ ಅವಧಿಗೆ ಹೋಲಿಸಿದರೆ 18.8 ಪಟ್ಟು ಹೆಚ್ಚು ಹೂಡಿಕೆ ಆಗಿದೆ ಎಂದು ಶ್ರೀರಾಮ್‌ ಹೇಳಿದರು.

ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಸಾಲಪತ್ರ ಆಧಾರಿತ (ಡೆಟ್‌) ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಯಿಂದ ಬರುವ ಲಾಭಕ್ಕೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸಲಾಗಿದೆ. ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಪ್ರಯೋಜನಗಳನ್ನು ಕೈಬಿಡಲಾಗಿದೆ. ಜೊತೆಗೆ, ತೆರಿಗೆ ಲೆಕ್ಕ ಹಾಕುವಾಗ ಇಂಡೆಕ್ಸೇಷನ್ (ಹಣದುಬ್ಬರದ ಪ್ರಮಾಣವನ್ನು ಲೆಕ್ಕ ಹಾಕಿ, ತೆರಿಗೆ ಹೊರೆ ಇಳಿಸಿಕೊಳ್ಳುವುದು) ಪ್ರಯೋಜನ ಪಡೆಯಲು ಆಗುವುದಿಲ್ಲ.

ತೆರಿಗೆ ಬದಲಾವಣೆಗಳು ಜಾರಿಗೆ ಬರುವುದಕ್ಕೂ ಮೊದಲೇ ಡೆಟ್‌ ಫಂಡ್‌ಗಳಲ್ಲಿ ಸಾಕಷ್ಟು ಹೂಡಿಕೆ ಆಗಿತ್ತು. ಹೀಗಾಗಿ ಹೆಚ್ಚಿನ ಪರಿಣಾಮ ಆಗಿಲ್ಲ. ಮುಂದಿನ ವರ್ಷವೂ ಬಡ್ಡಿದರ ಇದೇ ಪ್ರಮಾಣದಲ್ಲಿ ಗರಿಷ್ಠ ಮಟ್ಟದಲ್ಲಿಯೇ ಇದ್ದರೆ ಡೆಟ್‌ ಫಂಡ್‌ಗಳಲ್ಲಿ ಬಂಡವಾಳ ಒಳಹರಿವು ಹೆಚ್ಚಾಗಲಿದೆ. ಆದರೆ, ಹಾಗಾಗುವ ಸಾಧ್ಯತೆ ಕಡಿಮೆ. ಏಕೆಂದರೆ 2024ರ ಮಧ್ಯಭಾಗದಲ್ಲಿ ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಬಡ್ಡಿದರ ಇಳಿಕೆ ಮಾಡುವ ಪ್ರಕ್ರಿಯೆ ಅರಂಭ ಆಗುವ ನಿರೀಕ್ಷೆಇದೆ. ಹೀಗಾಗಿ ಬಹುಪಾಲು ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಗಮನ ಹರಿಸಲಿದ್ದಾರೆ ಎಂದು ಎಲ್‌ಐಸಿ ಮ್ಯೂಚುವಲ್ ಫಂಡ್‌ ಅಸೆಟ್ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನ ಹಿರಿಯ ನಿಧಿ ನಿರ್ವಾಹಕ ರಾಹುಲ್‌ ಸಿಂಗ್‌ ತಿಳಿಸಿದರು.

Highlights - ಲಿಕ್ವಿಡ್‌ ಫಂಡ್‌, ಮನಿ ಮಾರ್ಕೆಟ್‌ ಫಂಡ್‌ಗಳಲ್ಲಿ ಹೆಚ್ಚು ಹೂಡಿಕೆ 2024ರಲ್ಲಿ ಲಾಭ ಗಳಿಕೆ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.