ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಸೆಪ್ಟೆಂಬರ್‌ನಲ್ಲಿ ಬಂಡವಾಳ ಹೂಡಿಕೆ ಕಡಿಮೆ ಆಗಿದ್ದು, ನಿರ್ವಹಣಾ ಸಂಪತ್ತು ಮೌಲ್ಯವೂ ಇಳಿಕೆ ಕಂಡಿದೆ.
ಚಿನ್ನದ ಇಟಿಎಫ್‌ನಲ್ಲಿ ಆಗಸ್ಟ್‌ನಲ್ಲಿ ₹1,028 ಕೋಟಿಯಷ್ಟು ಹೂಡಿಕೆ ಆಗುವ ಮೂಲಕ 17 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ಹೂಡಿಕೆಯು ₹175 ಕೋಟಿಗೆ ಇಳಿಕೆ ಕಂಡಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.
ಲಾಭ ಗಳಿಸಿಕೊಳ್ಳಲು ಹೂಡಿಕೆದಾರರು ಮುಂದಾಗಿದ್ದರಿಂದ ಬಂಡವಾಳ ಹೂಡಿಕೆ ಕಡಿಮೆ ಆಗಿದೆ ಎಂದು ಅದು ಹೇಳಿದೆ. ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ಆಗಸ್ಟ್‌ನಲ್ಲಿ ₹24,318 ಕೋಟಿಯಷ್ಟು ಇದ್ದಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ₹23,800 ಕೋಟಿಗೆ ಇಳಿಕೆ ಕಂಡಿದೆ.
‘ಅಮೆರಿಕದಲ್ಲಿ ಬಡ್ಡಿದರವು ನಿರಂತರವಾಗಿ ಏರಿಕೆ ಆಗುತ್ತಿದೆ. ಹಣದುಬ್ಬರವು ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ಆರ್ಥಿಕ ಬೆಳವಣಿಗೆ ದರವು ಇಳಿಕೆ ಕಾಣುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಹೂಡಿಕೆಗೆ ಚಿನ್ನವು ಸುರಕ್ಷಿತ ಎನ್ನುವ ಭಾವನೆಯು ಮುಂದುವರಿಯುವ ನಿರೀಕ್ಷೆ ಇದೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್‌ವೆಸ್ಟ್‌ಮೆಂಟ್ ಅಡ್ವೈಸರಿ ಇಂಡಿಯಾದ ವಿಶ್ಲೇಷಕ ಮೆಲ್ವಿನ್ ಸ್ಯಾಂಟರಿಟಾ ಹೇಳಿದ್ದಾರೆ.
ಏಪ್ರಿಲ್–ಜೂನ್ ಅವಧಿಯಲ್ಲಿ ಚಿನ್ನದ ಇಟಿಎಫ್‌ನಲ್ಲಿ ₹398 ಕೋಟಿ ಹೂಡಿಕೆ ಆಗಿತ್ತು. ಮಾರ್ಚ್ ತ್ರೈಮಾಸಿಕದಲ್ಲಿ ₹1,243 ಕೋಟಿ, ಡಿಸೆಂಬರ್ ತ್ರೈಮಾಸಿಕದಲ್ಲಿ ₹320 ಕೋಟಿ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹165 ಕೋಟಿ ಬಂಡವಾಳ ಹಿಂತೆಗೆತ ಆಗಿದೆ. ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆದಾರರ ಖಾತೆಗಳ ಸಂಖ್ಯೆಯು ಆಗಸ್ಟ್ ಅಂತ್ಯದಲ್ಲಿ 47.95 ಲಕ್ಷದಿಂದ ₹48.06 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.
ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ (ಕೋಟಿಗಳಲ್ಲಿ)
ಜುಲೈ; ₹456
ಆಗಸ್ಟ್; ₹1,028
ಸೆಪ್ಟೆಂಬರ್; ₹175
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.