ADVERTISEMENT

ಮ್ಯೂಚುವಲ್ ಫಂಡ್‌: ಮಹಿಳೆಯರಿಗೆ ಹೂಡಿಕೆಯ ಉತ್ತಮ ಮಾರ್ಗ

ಪ್ರಜಾವಾಣಿ ವಿಶೇಷ
Published 14 ಜೂನ್ 2023, 23:35 IST
Last Updated 14 ಜೂನ್ 2023, 23:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

–ನಿತ್ಯಾನಂದ ಪ್ರಭು

ಉಳಿತಾಯದ ವಿಷಯ ಬಂದಾಗ ಮಹಿಳೆಯರು ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ತಮ್ಮ ಆದಾಯ ಕಡಿಮೆ ಇದ್ದರೂ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ತಲುಪಲು ವರು ಪ್ರತಿ ರೂಪಾಯಿಯನ್ನೂ ಕೂಡಿಡುತ್ತಾರೆ. ಕುಟುಂಬದ ಆದಾಯದಲ್ಲಿಯೇ ಒಂದಿಷ್ಟು ಹಣವನ್ನು ಸಂಗ್ರಹಿಸಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಆದರೆ, ಹಣದುಬ್ಬರ, ಠೇವಣಿ ದರ ಕಡಿಮೆ ಇರುವುದು ಹಾಗೂ ಬಡ್ಡಿದರ ಹೆಚ್ಚಾಗಿರುವುದು ಅವರ ಉಳಿತಾಯ ಪ್ರವೃತ್ತಿಗೆ ಅಡ್ಡಿಯಾಗಿವೆ.

ಹಣದುಬ್ಬರ ಮತ್ತು ಠೇವಣಿ ಬಡ್ಡಿ ಕಡಿಮೆ ಇರುವುದರಿಂದ ನಿಶ್ಚಿತ ಠೇವಣಿಯಂತಹ (ಎಫ್‌.ಡಿ.) ಸಾಂಪ್ರದಾಯಿಕ ಉಳಿತಾಯಗಳು ಜನಪ್ರಿಯತೆ ಕಳೆದುಕೊಳ್ಳುತ್ತಿವೆ. ಹಣದುಬ್ಬರದ ಏರಿಕೆಯು ಕುಟುಂಬದ ಆದಾಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಸಣ್ಣ ‍ಪ್ರಮಾಣದಲ್ಲಿ ಉಳಿತಾಯ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಬ್ಯಾಂಕ್‌ ಎಫ್‌.ಡಿ., ಪಿಪಿಎಫ್‌ ಮತ್ತು ಇತರ ಉಳಿತಾಯ ಯೋಜನೆಗಳು ಮತ್ತು ಅವಧಿ ಠೇವಣಿಗಳಿಂದ ಬರುವ ಬಡ್ಡಿ ಆದಾಯವು ಕಡಿಮೆ ಆಗಿರುವುದರಿಂದ ಸದ್ಯದ ಮಟ್ಟಿಗೆ ಮಹಿಳೆಯರಿಗೆ ಹೂಡಿಕೆ ಮಾಡಲು ಇರುವ ಉತ್ತಮ ಮಾರ್ಗವೆಂದರೆ ಮ್ಯೂಚುವಲ್ ಫಂಡ್‌. ಮಹಿಳೆಯರಿಗೆ ಹೂಡಿಕೆ ಆರಂಭಿಸಲು ಮ್ಯೂಚುವಲ್ ಫಂಡ್‌ಗಳು ಹೇಗೆ ಸೂಕ್ತವಾಗಲಿವೆ ಎನ್ನುವುದನ್ನು ತಿಳಿಯೋಣ.

ADVERTISEMENT

ಕೈಗೆಟಕುವಂತಿದೆ: ಮಹಿಳೆಯರು ಸಾಮಾನ್ಯವಾಗಿ ಮಕ್ಕಳ ಶಿಕ್ಷಣ, ಮದುವೆ ಮತ್ತು ಮನೆ ಖರೀದಿಯಂತಹ ದೀರ್ಘಾವಧಿಯ ಹಣಕಾಸಿನ ಯೋಜನೆಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸೂಕ್ತವಾಗಿವೆ. ಇಲ್ಲಿ ಅತಿದೊಡ್ಡ ಪ್ರಯೋಜನ ಎಂದರೆ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ); ಏಕೆಂದರೆ ಮಹಿಳೆಯರ ಮಿತವಾದ ಹೂಡಿಕೆ ಮನೋಧರ್ಮಕ್ಕೆ ಇದು ತಕ್ಕುದಾಗಿದೆ. ಬೇರೆ ಬೇರೆ ಪ್ರಮಾಣದ ಆದಾಯ ಹೊಂದಿರುವವರಿಗೆ ಮ್ಯೂಚುವಲ್ ಫಂಡ್‌ಗಳು ಕೈಗೆಟಕುವಂತಿವೆ. ತಿಂಗಳ ಪಾವತಿ ಮೊತ್ತ ₹500ರಿಂದ ಎಸ್‌ಐಪಿ ಆರಂಭಿಸಬಹುದು. ಈ ಕಾರಣಕ್ಕಾಗಿಯೇ ಪ್ರತಿ ವರ್ಷವೂ ಎಸ್‌ಐಪಿ ಆಯ್ಕೆ ಮಾಡಿಕೊಳ್ಳುವ ಹೊಸ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ.

ಸುಲಭ ಲಭ್ಯ: ಮ್ಯೂಚುವಲ್ ಫಂಡ್‌ ಯೋಜನೆಗಳನ್ನು ಖರೀದಿಸಲು ಖುದ್ದು ಭೇಟಿ ನೀಡಬೇಕು ಎಂದಿಲ್ಲ. ಆನ್‌ಲೈನ್‌ ಮೂಲಕವೇ ಯೋಜನೆಗಳನ್ನು ಖರೀದಿಸಬಹುದು. ದೇಶದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಬಳಕೆ ಹೆಚ್ಚಾಗಿರುವುದರಿಂದ ದೇಶದಾದ್ಯಂತ ಡಿಜಿಟಲ್‌ ವಿತರಣಾ ಜಾಲ ಸ್ಥಾಪಿಸಲು ಸಹ ಅನುಕೂಲ ಆಗಿದೆ.

ಬಂಡವಾಳ ಸೃಷ್ಟಿ: ಇತರ ಯೋಜನೆಗಳಿಗೆ ಹೋಲಿಸಿದರೆ ಈಕ್ವಿಟಿಗಳಲ್ಲಿ ಮಾಡುವ ಹೂಡಿಕೆಗಳಿಂದ ಬರುವ ಆದಾಯವು ಹೆಚ್ಚಿನದ್ದಾಗಿರುತ್ತದೆ. ಈ ನಿಟ್ಟಿನಲ್ಲಿ, ಬಂಡವಾಳ ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿಸಿಕೊಳ್ಳಲು ಮ್ಯೂಚುವಲ್ ಫಂಡ್‌ಗಳು ಮಹಿಳೆಯರಿಗೆ ಉತ್ತಮ ಅವಕಾಶ ಕಲ್ಪಿಸುತ್ತವೆ. ಹಣದುಬ್ಬರದ ಪ್ರಮಾಣವನ್ನು ಮೀರಿ ಮ್ಯೂಚುವಲ್ ಫಂಡ್‌ಗಳು ವಾರ್ಷಿಕವಾಗಿ ಉತ್ತಮ ಗಳಿಕೆಯನ್ನು ತಂದುಕೊಟ್ಟಿರುವ ನಿದರ್ಶನಗಳಿವೆ.

ನಗದೀಕರಣ: ಕುಟುಂಬದಲ್ಲಿ ಹಣದ ತುರ್ತು ಅಗತ್ಯವು ಯಾವಾಗ ಬೇಕಿದ್ದರೂ ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಹೂಡಿಕೆದಾರರು ಆರಂಭಿಕ ಲಾಕ್‌–ಇನ್‌ ಅವಧಿಯ ನಂತರ ಮ್ಯೂಚುವಲ್ ಫಂಡ್‌ ಯುನಿಟ್‌ಗಳನ್ನು ಮಾರಾಟ ಮಾಡಿ ಹಣ ಪಡೆದುಕೊಳ್ಳಬಹುದು. ಇತರ ಸಾಂಪ್ರಾಯಿಕ ಹೂಡಿಕೆಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಗಳಿಂದ ಬರುವ ಗಳಿಕೆಯು ಹೆಚ್ಚಿನದ್ದಾಗಿದೆ. ಆದರೆ, ಒಂದೊಮ್ಮೆ ನೀವು ಅವಧಿಗಿಂತಲೂ ಮುಂಚಿತವಾಗಿ ಯೋಜನೆಯಿಂದ ಹೊರಬರಬೇಕಿದ್ದರೆ ಅದಕ್ಕೆ ಶುಲ್ಕ ತೆರಬೇಕಾಗುತ್ತದೆ. ಅವಧಿಗೂ ಮುನ್ನವೇ ಯೋಜನೆಯನ್ನು ಮಾರಾಟ ಮಾಡುವುದನ್ನು ಇದು ತಪ್ಪಿಸುತ್ತದೆ.

ಬಂಡವಾಳ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಮುಂದಾದರೆ ಅದರಿಂದ ನೀವು ಕೈಸುಟ್ಟುಕೊಳ್ಳುವ ಅಪಾಯ ಇದೆ. ಹಣಕಾಸಿನ ಉತ್ಪನ್ನಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದರ ಸ್ವಲ್ಪ ಮಟ್ಟಿನ ತಿಳಿವಳಿಕೆ ಇರಬೇಕು ಮತ್ತು ವಹಿವಾಟು ಅಸ್ಥಿರವಾಗಿದ್ದಾಗ ಹೇಗೆ ಹೆಜ್ಜೆ ಇಡಬೇಕು ಎನ್ನುವುದೂ ತಿಳಿದಿರಬೇಕು. ಮ್ಯೂಚುವಲ್ ಫಂಡ್‌ನಲ್ಲಿ ನುರಿತ ನಿಧಿ ನಿರ್ವಾಹಕರು ನಿಮ್ಮ ಹಣವನ್ನು ನಿರ್ವಹಿಸುತ್ತಾರೆ. ಈಕ್ವಿಟಿ, ಡೆಟ್‌ ಮತ್ತು ಹೈಬ್ರಿಡ್‌ ಹೀಗೆ ಸಂಪತ್ತು ಸೃಷ್ಟಿಸುವ ಹಲವು ಮಾರ್ಗಗಳಲ್ಲಿ ನಿಮ್ಮ ಹಣವನ್ನು ತೊಡಗಿಸುತ್ತಾರೆ.

ತೆರಿಗೆ ಪ್ರಯೋಜನ: ಈಕ್ವಿಟಿ ಸಂಪರ್ಕಿತ ಉಳಿತಾಯ ಯೋಜನೆಯ (ಇಎಲ್‌ಎಸ್‌ಎಸ್‌) ಹೊಂದಿದ್ದರೆ, ಹಣಕಾಸು ವರ್ಷದ ಅಂತ್ಯದ ವೇಳೆಗೆ ತೆರಿಗೆ ಉಳಿಸುವ ಆಯ್ಕೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಇಎಲ್‌ಎಸ್‌ಎಸ್‌ನಲ್ಲಿ ಹೂಡಿಕೆ ಮಾಡಿರುವ ಹಣವು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ.

ಅಲ್ಪಾವಧಿ ಅಥವಾ ದೀರ್ಘಾವಧಿ ಹೀಗೆ ಪ್ರತಿ ಅಗತ್ಯಕ್ಕೂ ಮ್ಯೂಚುವಲ್ ಫಂಡ್‌ಗಳು ಸೂಕ್ತವಾಗಿವೆ. ಮಹಿಳೆಯರು ತಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಣಕಾಸು ವರ್ಷದ ಆರಂಭದಲ್ಲಿಯೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಜಾಣ ನಡೆ.

ನಿತ್ಯಾನಂದ ಪ್ರಭು, ಎಲ್‌ಐಸಿ ಮ್ಯೂಚುವಲ್ ಫಂಡ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.