
ನವದೆಹಲಿ: ದೇಶದ ಐ.ಟಿ ಸೇವಾ ವಲಯದ ಎರಡನೆಯ ಅತಿದೊಡ್ಡ ಕಂಪನಿಯಾದ ಇನ್ಫೊಸಿಸ್, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ಅಮೆರಿಕದ ಆ್ಯಂಥ್ರೊಪಿಕ್ ಕಂಪನಿಯ ಜೊತೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಾಗಿ ಮಂಗಳವಾರ ಘೋಷಿಸಿದೆ.
ಬೃಹತ್ ಪ್ರಮಾಣದ ಕಂಪನಿ, ಸಂಸ್ಥೆಗಳ ಬಳಕೆಗೆ ಅಗತ್ಯವಿರುವ ಎ.ಐ. ಉಪಕರಣಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಆ ಉಪಕರಣ ಅಳವಡಿಕೆ ಮಾಡಿಕೊಡುವುದು ಈ ಪಾಲುದಾರಿಕೆಯ ಒಂದು ಭಾಗ. ದೂರಸಂಪರ್ಕ, ಹಣಕಾಸು ಸೇವೆಗಳು, ತಯಾರಿಕೆ ಮತ್ತು ತಂತ್ರಾಂಶ ಅಭಿವೃದ್ಧಿ ವಲಯದ ಕಂಪನಿಗಳನ್ನು ಗುರಿಯಾಗಿ ಇರಿಸಿಕೊಂಡು ಇನ್ಫೊಸಿಸ್ ಮತ್ತು ಆ್ಯಂಥ್ರೊಪಿಕ್ ಈ ಸೇವೆಗಳನ್ನು ನೀಡುವ ಉದ್ದೇಶ ಹೊಂದಿವೆ.
ಪಾಲುದಾರಿಕೆಯ ಭಾಗವಾಗಿ ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ‘ಆ್ಯಂಥ್ರೊಪಿಕ್ ಶ್ರೇಷ್ಠತಾ ಕೇಂದ್ರ’ವನ್ನು ಆರಂಭಿಸಲಾಗುತ್ತದೆ. ಇದು ಬಹುಹಂತಗಳ ಕೆಲಸಗಳನ್ನು ನಿರ್ವಹಿಸಬಲ್ಲ ಹಾಗೂ ತಾನಾಗಿಯೇ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲ ‘ಎಐ ಏಜೆಂಟ್‌ಗಳನ್ನು’ ರೂಪಿಸಿ, ಅವುಗಳನ್ನು ಅಳವಡಿಕೆ ಮಾಡುವ ಕೆಲಸ ನಿರ್ವಹಿಸಲಿದೆ. ನಂತರದ ದಿನಗಳಲ್ಲಿ ಈ ಬಗೆಯ ಏಜೆಂಟ್‌ಗಳನ್ನು ಇತರ ಉದ್ಯಮ ವಲಯಗಳಿಗೂ ವಿಸ್ತರಿಸಬಹುದು ಎಂದು ಇನ್ಫೊಸಿಸ್‌ನ ಪ್ರಕಟಣೆ ತಿಳಿಸಿದೆ.
ಪಾಲುದಾರಿಕೆಯ ಭಾಗವಾಗಿ ಆ್ಯಂಥ್ರೊಪಿಕ್‌ನ ಕ್ಲಾಡ್ ಮಾದರಿಗಳನ್ನು ಇನ್ಫೊಸಿಸ್‌ನ ಟೊಪಾಜ್ ಜೊತೆ ಸಂಯೋಜಿಸಲಾಗುತ್ತದೆ.
ಬಹು ಹಂತಗಳನ್ನು ಒಳಗೊಂಡ ಕೆಲಸಗಳನ್ನು ಸ್ವತಂತ್ರವಾಗಿ ನಿಭಾಯಿಸಬಲ್ಲ ವ್ಯವಸ್ಥೆಗಳ ಮೇಲೆ ಪ್ರಮುಖ ಗಮನ ನೀಡಲಾಗುತ್ತದೆ. ವಿವಿಧ ಉದ್ಯಮಗಳ ಅಗತ್ಯಕ್ಕೆ ಅನುಗುಣವಾದ ಎ.ಐ ಏಜೆಂಟ್‌ಗಳನ್ನು ಅಭಿವೃದ್ಧಿಪಡಿಸಲು ಕೂಡ ಗಮನ ನೀಡಲಾಗುತ್ತದೆ.
‘ಪ್ರಾತ್ಯಕ್ಷಿಕೆಯ ಹಂತದಲ್ಲಿ ಕೆಲಸ ಮಾಡುವ ಎ.ಐ ಮಾದರಿ ಹಾಗೂ ಉದ್ಯಮದಲ್ಲಿ ಕೆಲಸ ಮಾಡುವ ಎ.ಐ ಮಾದರಿ ನಡುವೆ ದೊಡ್ಡ ಅಂತರ ಇದೆ. ಈ ಅಂತರವನ್ನು ತಗ್ಗಿಸಲು ವಿಷಯ ಪರಿಣತಿ ಬೇಕು. ದೂರಸಂಪರ್ಕ, ಹಣಕಾಸು ಸೇವೆಗಳು, ತಯಾರಿಕಾ ವಲಯಕ್ಕೆ ಸಂಬಂಧಿಸಿದ ಅಂತಹ ಪರಿಣತಿಯು ಇನ್ಫೊಸಿಸ್ ಬಳಿ ಇದೆ’ ಎಂದು ಆ್ಯಂಥ್ರೊಪಿಕ್ ಕಂಪನಿಯ ಸಿಇಒ ಡೇರಿಯೊ ಅಮೊಡೈ ಹೇಳಿದ್ದಾರೆ.
ಹಿಂದೆಂದಿಗಿಂತ ಹೆಚ್ಚು ವೇಗದ ಬದಲಾವಣೆ: ನಿಲೇಕಣಿ
ಬೆಂಗಳೂರು: ತಂತ್ರಾಂಶ ಅಭಿವೃದ್ಧಿಯ ರೂಪುರೇಷೆಗಳನ್ನು ಕೃತಕ ಬುದ್ಧಿಮತ್ತೆಯು ಬದಲಾಯಿಸುತ್ತಿದೆ ಕೋಡಿಂಗ್ ಕೆಲಸಗಳು ತಂತ್ರಜ್ಞಾನ ವಲಯದ ವೃತ್ತಿಪರರ ಪಾಲಿಗೆ ಪ್ರಧಾನ ಹೊಣೆಯಾಗಿ ಇರುವುದಿಲ್ಲ ಎಂದು ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.
ಇಂಟರ್ನೆಟ್‌ನಿಂದ ಆರಂಭಿಸಿ ಸ್ಮಾರ್ಟ್‌ಫೋನ್‌ವರೆಗೆ ಎಲ್ಲೆಡೆ ಎ.ಐ. ಅಳವಡಿಕೆಯು ಭರದಿಂದ ಸಾಗಿದೆ. ಇದು ಹಿಂದೆ ಆಗಿರುವ ಇತರ ಯಾವುದೇ ತಾಂತ್ರಿಕ ಬದಲಾವಣೆಗಳಿಗಿಂತ ಹೆಚ್ಚಿನ ವೇಗದಲ್ಲಿ ಆಗುತ್ತಿದೆ. ಉದ್ದಿಮೆಗಳು ಕೆಲಸ ಮಾಡುವ ಸ್ವರೂಪವನ್ನು ಇದು ಆಮೂಲಾಗ್ರವಾಗಿ ಬದಲಾಯಿಸಲಿದೆ ಎಂದು ನಿಲೇಕಣಿ ಪ್ರತಿಪಾದಿಸಿದ್ದಾರೆ.
‘ಇನ್ಫೊಸಿಸ್‌ನ ಹೂಡಿಕೆದಾರರ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರತಿಯೊಂದು ಉದ್ದಿಮೆಯೂ ತನ್ನ ಕಾರ್ಯಾಚರಣೆಯ ಬಗ್ಗೆ ಮರು ಆಲೋಚನೆ ನಡೆಸಬೇಕಾಗುತ್ತದೆ’ ಎಂದಿದ್ದಾರೆ. ಎ.ಐ ಎಂಜಿನಿಯರ್‌ಗಳು ವಿಧಿವಿಜ್ಞಾನ ವಿಶ್ಲೇಷಕರು ಸೇರಿದಂತೆ ಹಲವು ಕೆಲಸಗಳಿಗೆ ಪರಿಣತರ ಅಗತ್ಯ ಇರಲಿದೆ. ಹಿಂದೆ ಇಲ್ಲದಿದ್ದ ಹಲವು ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಎ.ಐ ಅಳವಡಿಕೆಯ ವೇಗವನ್ನು ವಿವರಿಸಿದ ಅವರು ‘ಇಂಟರ್ನೆಟ್‌ಗೆ ಒಂದು ನೂರು ಕೋಟಿ ಬಳಕೆದಾರರನ್ನು ತಲುಪಲು ದಶಕಕ್ಕೂ ಹೆಚ್ಚಿನ ಅವಧಿ ಬೇಕಾಯಿತು. ಸ್ಮಾರ್ಟ್‌ಫೋನ್ ಇಷ್ಟು ಸಂಖ್ಯೆಯ ಬಳಕೆದಾರರನ್ನು ತಲುಪಲು ಐದು ವರ್ಷಗಳು ಬೇಕಾದವು. ಆದರೆ ಈ ಹಿಂದಿನ ತಂತ್ರಜ್ಞಾನಗಳ ಕಾಲಘಟ್ಟದಲ್ಲಿ ಸೃಷ್ಟಿಯಾದ ಮೂಲಸೌಕರ್ಯ ಬಳಸಿ ಎ.ಐ ಅಳವಡಿಕೆಯು ಒಂದೆರಡು ವರ್ಷಗಳಲ್ಲಿ ಆಗುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.