ADVERTISEMENT

ಹಣಕಾಸು ಸಾಕ್ಷರತೆ | ತಿಂಗಳ ಆದಾಯಕ್ಕೆ ಹೂಡಿಕೆ ಸೂತ್ರ!

ರಾಜೇಶ್ ಕುಮಾರ್ ಟಿ. ಆರ್.
Published 8 ಜುಲೈ 2024, 0:29 IST
Last Updated 8 ಜುಲೈ 2024, 0:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪ್ರತಿ ತಿಂಗಳು ಹೂಡಿಕೆ ಮೊತ್ತದ ಮೇಲೆ ಒಂದಿಷ್ಟು ನಿಶ್ಚಿತ ಆದಾಯ ಬರಬೇಕು ಎಂದು ಅನೇಕರು ಬಯಸುತ್ತಾರೆ. ಹೀಗೆ ಮಾಸಿಕ ಆದಾಯ ನಿರೀಕ್ಷಿಸುವವರಿಗೆ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳು ಮತ್ತು ಕಡಿಮೆ ರಿಸ್ಕ್ ಇರುವ ಹೂಡಿಕೆಯ ಆಯ್ಕೆಗಳಿವೆ.

ಹೆಚ್ಚು ರಿಸ್ಕ್ ಇರುವ ಹೂಡಿಕೆಗಳಲ್ಲಿ ಗಳಿಕೆ ಸಾಧ್ಯತೆಯೂ ಹೆಚ್ಚು. ಅದೇ ರೀತಿ ಕಡಿಮೆ ರಿಸ್ಕ್ ಇರುವ ಹೂಡಿಕೆಗಳಲ್ಲಿ ಗಳಿಕೆಯೂ ಕಡಿಮೆ. ಬನ್ನಿ, ಕೆಲ ಪ್ರಮುಖ ಲೋ ರಿಸ್ಕ್ ಮತ್ತು ಹೈ ರಿಸ್ಕ್ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿಯೋಣ.

ADVERTISEMENT

ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (ಪಿಒಎಂಐಎಸ್):

ಇದು ಕೇಂದ್ರ ಸರ್ಕಾರದ ಖಾತರಿ ಇರುವ ಸಣ್ಣ ಉಳಿತಾಯ ಯೋಜನೆ. ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ಪ್ರತಿ ತಿಂಗಳು ನಿಶ್ಚಿತ ಆದಾಯವನ್ನು ಈ ಯೋಜನೆಯು ತಂದುಕೊಡುತ್ತದೆ. ರಿಸ್ಕ್ ಬೇಡ ಹಣ ಸುರಕ್ಷಿತವಾಗಿರಬೇಕು ಅನ್ನೋರಿಗೆ ಇದು ಹೇಳಿ ಮಾಡಿಸಿದ ಯೋಜನೆ.

ಈ ಯೋಜನೆಯಡಿ ಕನಿಷ್ಠ ₹1 ಸಾವಿರ ಮತ್ತು ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಾದರೆ ₹15 ಲಕ್ಷ ತೊಡಗಿಸಬಹುದು. 

ಪ್ರಸ್ತುತ ಈ ಯೋಜನೆಯ ಬಡ್ಡಿ ದರ ಶೇ 7.40ರಷ್ಟಿದ್ದು, ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ. ಅವಧಿಗೆ ಮುನ್ನವೇ ಹೂಡಿಕೆ ಹಿಂಪಡೆದರೆ ದಂಡ ಕಟ್ಟಬೇಕಾಗುತ್ತದೆ. ಈ ಯೋಜನೆಯಲ್ಲಿ ಜಂಟಿಯಾಗಿ ₹15 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹9,250 ಆದಾಯ ಸಿಗುತ್ತದೆ.

ಏಕ ವ್ಯಕ್ತಿ ಖಾತೆಯಲ್ಲಿ ಗರಿಷ್ಠ ಮಿತಿ ₹9 ಲಕ್ಷ ಹೂಡಿಕೆ ಮಾಡಿದರೆ ಮಾಸಿಕ ₹5,550 ಲಭಿಸುತ್ತದೆ. ಇದು ತಂಬಾ ದೊಡ್ಡ ಮೊತ್ತದ ಗಳಿಕೆಯೇನಲ್ಲ. ಆದರೆ, ನಮಗೆ ಬಂಡವಾಳ ಸುರಕ್ಷಿತವಾಗಿರುವ ಜೊತೆಗೆ ನಿಶ್ಚಿತ ಆದಾಯವೂ ಬೇಕು ಎನ್ನುವವರಿಗೆ ಉತ್ತಮ ಯೋಜನೆಯಾಗಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್ ):

ಈ ಯೋಜನೆಯಡಿ 5 ವರ್ಷ ಲಾಕಿನ್ ಅವಧಿಯಿದೆ. ಸದ್ಯದ ಬಡ್ಡಿ ದರ ಶೇ 8.2ರಷ್ಟಿದೆ. 60 ವರ್ಷ ಮೇಲ್ಪಟ್ಟವರಿಗೆ ಇದೊಂದು ಉತ್ತಮ ಹೂಡಿಕೆ ಯೋಜನೆ. ಎಸ್‌ಸಿಎಸ್ಎಸ್‌ ಯೋಜನೆಯಲ್ಲಿ ಹೂಡಿಕೆ ಮೇಲಿನ ಬಡ್ಡಿ ಗಳಿಕೆಯು ಸಂಪೂರ್ಣ ಆದಾಯ ತೆರಿಗೆಗೆ ಒಳಪಡುತ್ತದೆ. ಆದರೆ, ಹಿರಿಯ ನಾಗರಿಕರು ವಾರ್ಷಿಕವಾಗಿ ಗಳಿಸುವ ₹50 ಸಾವಿರದ ವರೆಗಿನ ಮೊತ್ತಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ.

ಅಂದರೆ ಹಿರಿಯ ನಾಗರಿಕರೊಬ್ಬರು ಎಸ್‌ಸಿಎಸ್ಎಸ್ ಯೋಜನೆಯಲ್ಲಿ ₹6.25 ಲಕ್ಷ ಹೂಡಿಕೆ ಮಾಡಿದರೆ ವಾರ್ಷಿಕ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ. ಈ ಯೋಜನೆಯಡಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವು ಪಾವತಿಯಾಗುತ್ತದೆ. ಗರಿಷ್ಠ ₹15 ಲಕ್ಷದ ವರೆಗೆ ಹೂಡಿಕೆಗೆ ಅವಕಾಶವಿದೆ.

ಪಿಪಿಎಫ್ ಅಥವಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗಿಂತ ಇದರಲ್ಲಿ ಹಿರಿಯ ನಾಗರಿಕರಿಗೆ ಲಾಭವಿದೆ. ಅಲ್ಲದೆ, ಷೇರು ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿರುವ ಏರಿಳಿತವೂ ಇದರಲ್ಲಿ ಇರುವುದಿಲ್ಲ. ಹೂಡಿಕೆಗೆ ಇಲ್ಲಿ ಹೆಚ್ಚಿನ ಸುರಕ್ಷತೆ ಇದೆ.

ಕಾರ್ಪೊರೇಟ್ ನಿಶ್ಚಿತ ಠೇವಣಿ:

ಪೂರ್ವ ನಿರ್ಧರಿತ ಅವಧಿಗೆ ಹೂಡಿಕೆದಾರರು ಕಂಪನಿಗಳ ಬಳಿ ಹಣವನ್ನು ಠೇವಣಿ ಇಡುವ ವ್ಯವಸ್ಥೆಯನ್ನು ಕಾರ್ಪೊರೇಟ್ ಅಥವಾ ಕಂಪನಿ ಎಫ್.ಡಿ ಎಂದು ಕರೆಯುತ್ತಾರೆ. ಸದ್ಯ ಕಾರ್ಪೊರೇಟ್ ಎಫ್.ಡಿ ಬಡ್ಡಿ ದರವು ಶೇ 8.5ರಿಂದ ಶೇ 9.5ರ ವರೆಗೆ ಇದೆ. ಈ ರೀತಿಯ ಎಫ್.ಡಿ ಹೂಡಿಕೆಯನ್ನು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒದಗಿಸುತ್ತವೆ.

ಕಾರ್ಪೊರೇಟ್ ಎಫ್.ಡಿಗಳಲ್ಲಿ ಬಡ್ಡಿ ದರ ಸಾಮಾನ್ಯ ಎಫ್.ಡಿಗಳ ಬಡ್ಡಿ ದರಕ್ಕಿಂತ ಮೂರ್ನಾಲ್ಕು ಪರ್ಸೆಂಟ್ ಹೆಚ್ಚಿಗೆ ಸಿಗುತ್ತದೆ. ಆದರೆ, ಕಾರ್ಪೊರೇಟ್ ಎಫ್.ಡಿಗಳಲ್ಲಿ ಕೊಂಚ ರಿಸ್ಕ್ ಜಾಸ್ತಿ ಇರುತ್ತದೆ. ಸ್ವಲ್ಪ ರಿಸ್ಕ್ ಇದ್ದರೂ ಪರವಾಗಿಲ್ಲ, ಹೆಚ್ಚಿಗೆ ಬಡ್ಡಿ ಲಾಭಾಂಶ ಬೇಕು ಎನ್ನುವವರು ಕಾರ್ಪೊರೇಟ್ ಎಫ್.ಡಿಗಳನ್ನು ಪರಿಗಣಿಸಬಹುದು.

ಆದರೆ, ಯಾವುದೇ ನಿರ್ದಿಷ್ಟ ಕಂಪನಿಯ ಎಫ್.ಡಿ ಬಗ್ಗೆ ಪೂರ್ವಾಪರ ಅರಿಯದೆ ಹೂಡಿಕೆ ಮಾಡಬಾರದು. ಎಎಎ ರೇಟಿಂಗ್ ಇದ್ದರೆ ಆ ಎಫ್.ಡಿ ಸ್ವಲ್ಪ ಹೆಚ್ಚು ಸುರಕ್ಷಿತವಾಗಿದೆ ಎಂದರ್ಥ. ಆದರೆ, ರೇಟಿಂಗ್ ಕಡಿಮೆ ಇದ್ದರೆ ಹಲವು ರಿಸ್ಕ್‌ಗಳಿವೆ ಎನ್ನುವುದನ್ನು ಮನಗಾಣಬೇಕು.

ಮ್ಯೂಚುವಲ್ ಫಂಡ್ ಎಸ್‌ಡಬ್ಲ್ಯುಪಿ:

ಮ್ಯೂಚುವಲ್ ಫಂಡ್ ಹೂಡಿಕೆಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್‌ಐಪಿ) ಹೇಗೆ ಜಾರಿಯಲ್ಲಿ ಇದೆಯೋ ಅದೇ ಮಾದರಿಯಲ್ಲಿ ಹೂಡಿಕೆ ಮೊತ್ತ ಮತ್ತು ಅದರ ಮೇಲಿನ ಲಾಭವನ್ನು ವ್ಯವಸ್ಥಿತವಾಗಿ ಹಿಂಪಡೆಯಲು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (ಎಸ್‌ಡಬ್ಲ್ಯುಪಿ) ಇದೆ. ಹೂಡಿಕೆ ಮಾಡಿರುವ ಮೊತ್ತವನ್ನು ಮಾಸಿಕ, ತ್ರೈಮಾಸಿಕ, 6 ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮ್ಯೂಚುವಲ್ ಫಂಡ್‌ನಿಂದ ಹೊರತೆಗೆಯುವ ವ್ಯವಸ್ಥೆಯೇ ಎಸ್‌ಡಬ್ಲ್ಯುಪಿ.

ಹೆಚ್ಚು ಲಾಭವೂ ಬೇಕು, ನಿಗದಿತ ಸಮಯಕ್ಕೆ ನಿಶ್ಚಿತ ಆದಾಯವೂ ಬೇಕು ಎನ್ನುವವರು ಮ್ಯೂಚುವಲ್ ಫಂಡ್ ಎಸ್‌ಡಬ್ಲ್ಯುಪಿ ಯೋಜನೆಯ ಮೊರೆ ಹೋಗಬಹುದು. ನಿಮ್ಮ ಮ್ಯೂಚುವಲ್ ಫಂಡ್‌ನಲ್ಲಿ ₹5 ಲಕ್ಷ ಇದೆ ಎಂದು ಭಾವಿಸೋಣ. ಪ್ರತಿ ತಿಂಗಳು ಅದರಿಂದ ₹20 ಸಾವಿರ ಮೊತ್ತ ವಾಪಸ್ ಪಡೆಯಲು ತೀರ್ಮಾನಿಸುತ್ತೀರಿ ಎಂದುಕೊಳ್ಳೋಣ. ಹೀಗೆ ನಿರ್ಧರಿಸಿದ ಬಳಿಕ ಮ್ಯೂಚುವಲ್ ಫಂಡ್ ಹೌಸ್‌ಗೆ ಸ್ಥಾಯಿ ಸೂಚನೆ ಕೊಡುತ್ತೀರಿ. ಈ ಸೂಚನೆಯ ಬಳಿಕ ಪ್ರತಿ ತಿಂಗಳು ₹20 ಸಾವಿರ ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಹೀಗೆ ಒಟ್ಟು ₹5 ಲಕ್ಷದ ಮೊತ್ತವು ಹಂತ ಹಂತವಾಗಿ ಮುಂದಿನ 24 ತಿಂಗಳ ಕಾಲ ನಿಮ್ಮ ಖಾತೆಗೆ ಸಂದಾಯವಾಗುತ್ತದೆ.

ಎಸ್‌ಡಬ್ಲ್ಯುಪಿಯಲ್ಲಿ ಸಾಮಾನ್ಯವಾಗಿ ಎರಡು ಆಯ್ಕೆ ಸಿಗುತ್ತವೆ. ಒಂದನೆಯದು ಹೂಡಿಕೆ ಮೇಲೆ ಬಂದ ಲಾಭವನ್ನು ಮಾತ್ರ ನಿಯಮಿತವಾಗಿ ಹಿಂಪಡೆದುಕೊಳ್ಳುವುದು. ಮತ್ತೊಂದು ಹೂಡಿಕೆ ಮತ್ತು ಲಾಭಾಂಶವನ್ನು ಅನುಕೂಲಕ್ಕೆ ತಕ್ಕಂತೆ ನಿಗದಿತ ಸಮಯಕ್ಕೆ ನಗದೀಕರಣ ಮಾಡಿಕೊಳ್ಳುವುದು. ಈ ಎರಡರ ಪೈಕಿ ನಿಮಗೆ ಯಾವುದು ಅನುಕೂಲವೋ ಅದನ್ನು ಪಡೆಯಬಹುದು.‌

ಐದನೇ ವಾರವೂ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಐದನೇ ವಾರವೂ ಜಿಗಿತ ಕಂಡಿವೆ. 79996 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.22ರಷ್ಟು ಜಿಗಿದಿದೆ. 24323 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.3ರಷ್ಟು ಹೆಚ್ಚಳವಾಗಿದೆ.  ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಸ್ಥಳೀಯ ಕಂಪನಿಗಳ ಮೇಲೆ ಹೂಡಿಕೆ ಮಾಡಲು ವಿದೇಶಿ ಕಂಪನಿಗಳ ಉತ್ಸುಕತೆ ಐ.ಟಿ ಕಂಪನಿ ಷೇರುಗಳ ಜಿಗಿತ ಸೇರಿ ಹಲವು ಅಂಶಗಳು ಷೇರುಪೇಟೆ ಪುಟಿದೇಳಲು ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.32 ಫಾರ್ಮಾ ಶೇ 3.66 ಮಾಧ್ಯಮ ಶೇ 2.77 ಅನಿಲ ಮತ್ತು ತೈಲ ಶೇ 2.65 ಎನರ್ಜಿ ಶೇ 1.76 ಎಫ್ಎಂಸಿಜಿ ಶೇ 1.61 ಲೋಹ ಶೇ 1.59 ರಿಯಲ್ ಎಸ್ಟೇಟ್ ಶೇ 1.3ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 0.12ರಷ್ಟು ಇಳಿಕೆ ಕಂಡಿದೆ. ಇಳಿಕೆ–ಏರಿಕೆ: ವಾರದ ಅವಧಿಯಲ್ಲಿ ನಿಫ್ಟಿಯಲ್ಲಿ ಟೈಟನ್ ಶೇ 4.02 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.11 ಇಂಡಸ್ ಇಂಡ್ ಬ್ಯಾಂಕ್ ಶೇ 2.05 ಶ್ರೀರಾಮ್ ಫೈನಾನ್ಸ್ ಶೇ 1.57 ಏರ್‌ಟೆಲ್ ಶೇ 1.06 ಅದಾನಿ ಎಂಟರ್‌ಪ್ರೈಸಸ್ ಶೇ 0.88 ಹೀರೊಮೋಟೊಕಾರ್ಪ್ ಶೇ 0.53 ಮತ್ತು ಬಜಾಜ್ ಫಿನ್‌‌ಸರ್ವ್ ಶೇ 0.5ರಷ್ಟು ಕುಸಿದಿವೆ. ಒಎನ್‌ಜಿಸಿ ಶೇ 5.14 ಇನ್ಫೊಸಿಸ್ ಶೇ 5.12 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 3.98 ಕೋಲ್ ಇಂಡಿಯಾ ಶೇ 3.94 ವಿಪ್ರೊ ಶೇ 3.9 ಟಾಟಾ ಕನ್ಸ್ಯೂಮರ್ ಶೇ 3.64 ಸನ್ ಫಾರ್ಮಾ ಶೇ 3.05 ಹಿಂದುಸ್ತಾನ್‌ ಯೂನಿಲಿವರ್ ಶೇ 2.91 ಮತ್ತು ಟಿಸಿಎಸ್ ಶೇ 2.75ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಡೆಲ್ಟಾ ಕಾರ್ಪ್ ಟಿಸಿಎಸ್ ಎಚ್‌ಸಿಎಲ್ ಟೆಕ್ ಆನಂದ್ ರಾಠಿ ವೆಲ್ತ್ ಐಆರ್‌ಇಡಿಎ ಅವೆನ್ಸೂ ಸೂಪರ್ ಮಾರ್ಕೆಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಕಂಪನಿಗಳ ತ್ರೈಮಾಸಿಕ ಸಾಧನೆ ವರದಿ ಕೇಂದ್ರ ಬಜೆಟ್ ಸೇರಿ ಹಲವು ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.