ADVERTISEMENT

ದೇಶದ ಬೆಳವಣಿಗೆಯಲ್ಲಿ ಹೂಡಿಕೆದಾರರು ಭಾಗಿ: ಕೆನರಾ ರೊಬೆಕೊದ ಸದಾನಂದ ಪ್ಯಾಟಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 19:19 IST
Last Updated 12 ಜನವರಿ 2026, 19:19 IST
‘ಪ್ರಜಾವಾಣಿ’ಯ ಬೆಂಗಳೂರಿನ ಕಚೇರಿಯಲ್ಲಿ ಸೋಮವಾರ ನಡೆದ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಕೆನರಾ ರೊಬೆಕೊ ಆಸ್ತಿ ನಿರ್ವಹಣಾ ಕಂಪನಿಯ ವಲಯ ಮಾರಾಟ ಮುಖ್ಯಸ್ಥ ಸದಾನಂದ ಪ್ಯಾಟಿ ಮಾತನಾಡಿದರು. –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ಯ ಬೆಂಗಳೂರಿನ ಕಚೇರಿಯಲ್ಲಿ ಸೋಮವಾರ ನಡೆದ ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಕೆನರಾ ರೊಬೆಕೊ ಆಸ್ತಿ ನಿರ್ವಹಣಾ ಕಂಪನಿಯ ವಲಯ ಮಾರಾಟ ಮುಖ್ಯಸ್ಥ ಸದಾನಂದ ಪ್ಯಾಟಿ ಮಾತನಾಡಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: 2030ರ ವೇಳೆಗೆ 7 ಟ್ರಿಲಿಯನ್‌ ಡಾಲರ್‌ (ಸರಿಸುಮಾರು ₹630 ಲಕ್ಷ ಕೋಟಿ) ಮೌಲ್ಯದ ಅರ್ಥ ವ್ಯವಸ್ಥೆಯಾಗಿ ಬೆಳೆಯುವ ಹಾದಿಯಲ್ಲಿ ಭಾರತ ಸಾಗುತ್ತಿದೆ. ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಜನಸಾಮಾನ್ಯರು ಹೂಡಿಕೆಗಳ ಮೂಲಕ ಭಾಗಿಯಾಗಬಹುದು ಎಂದು ಕೆನರಾ ರೊಬೆಕೊ ಆಸ್ತಿ ನಿರ್ವಹಣಾ ಕಂಪನಿಯ ವಲಯ ಮಾರಾಟ ಮುಖ್ಯಸ್ಥ ಸದಾನಂದ ಪ್ಯಾಟಿ ಹೇಳಿದರು.

ಕೆನರಾ ರೊಬೆಕೊ ಕಂಪನಿಯು ‘ಪ್ರಜಾವಾಣಿ’ ಸಹಯೋಗದಲ್ಲಿ, ಪತ್ರಿಕೆಯ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

‘ನೀವು ಗಳಿಸಿದ ಹಣವು ನಿಮಗಾಗಿ ಇನ್ನಷ್ಟು ಗಳಿಸಿಕೊಡುವಂತೆ ಮಾಡುತ್ತಿದ್ದೀರಾ’ ಎಂದು ಸಭಿಕರನ್ನು ಪ್ರಶ್ನಿಸಿದ ಪ್ಯಾಟಿ ಅವರು, ‘ಹೂಡಿಕೆದಾರರ ಶಿಕ್ಷಣ ಅಂದರೆ, ಅವರ ಹಣವು ಅವರಿಗಾಗಿ ಇನ್ನಷ್ಟು ಗಳಿಸುವ ಬಗೆಯನ್ನು ತಿಳಿಸುವುದು’ ಎಂದರು.

ADVERTISEMENT

ಹೂಡಿಕೆಯ ಪ್ರಕ್ರಿಯೆಯಲ್ಲಿ ಶಿಸ್ತು ಇರಬೇಕು. ಹೂಡಿಕೆ ಮಾಡಿದ ಹಣಕ್ಕೆ ಪ್ರತಿಯಾಗಿ ಬಡ್ಡಿ, ಚಕ್ರಬಡ್ಡಿ ಸಿಗಬೇಕು ಎಂದಾದರೆ ದೀರ್ಘ ಅವಧಿಗೆ ಹಣ ತೊಡಗಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ‘ಆದರೆ, ಆರಂಭದಲ್ಲಿ ಹೂಡಿಕೆಯು ಬೋರಿಂಗ್ ಅನ್ನಿಸುತ್ತದೆ’ ಎಂದೂ ಹೇಳಿದರು. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತವಾಗಿ ಹಣ ಹಿಂಪಡೆಯುವಿಕೆ (ಎಸ್‌ಡಬ್ಲ್ಯುಪಿ) ಮತ್ತು ವ್ಯವಸ್ಥಿತ ವರ್ಗಾವಣೆ ಯೋಜನೆಯ (ಎಸ್‌ಟಿಪಿ) ಬಗ್ಗೆ ಅವರು ಮಾಹಿತಿ ನೀಡಿದರು.

ಈಕ್ವಿಟಿ, ಸಾಲಪತ್ರ, ಹೈಬ್ರಿಡ್‌ ಫಂಡ್‌ಗಳ ಬಗ್ಗೆ, ಇಟಿಎಫ್‌ಗಳ ಬಗ್ಗೆ ಅವರು ವಿವರ ಒದಗಿಸಿದರು. ಚಿನ್ನವನ್ನು ಖರೀದಿ ಮಾಡಲು ಇಟಿಎಫ್‌ಗಳ ಮೊರೆ ಹೋಗುವುದು ಬಹಳ ಸೂಕ್ತವಾದ ನಡೆ ಎಂದರು. ಹೂಡಿಕೆದಾರರು ತಾವು ಎಷ್ಟರಮಟ್ಟಿಗೆ ಸವಾಲು ತೆಗೆದುಕೊಳ್ಳಲು ಸಿದ್ಧ ಎಂಬುದನ್ನು ತೀರ್ಮಾನಿಸಿ ಯಾವ ಹೂಡಿಕೆ ತಮಗೆ ಸರಿಯಾಗುತ್ತದೆ ಎಂಬುದನ್ನು ನಿರ್ಧರಿಸಬೇಕು ಎಂದರು.

ಉಪನ್ಯಾಸದ ನಂತರದಲ್ಲಿ ಪ್ರಶ್ನೋತ್ತರಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಸರಿಯಾದ ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯು ಸಭಿಕರಿಂದ ಎದುರಾಯಿತು. ‘ಅದಕ್ಕೆ ತಜ್ಞರಿಂದ ಸಲಹೆ ಪಡೆದು ಮುಂದಡಿ ಇರಿಸುವುದು ಸೂಕ್ತವಾಗುತ್ತದೆ’ ಎಂದು ಪ್ಯಾಟಿ ಉತ್ತರಿಸಿದರು.

ಹಾಗೆಯೇ, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರು ಐದರಿಂದ ಏಳು ವರ್ಷಗಳ ಅವಧಿಗೆ ಹೂಡಿಕೆ ಮಾಡುವುದು ಸೂಕ್ತವಾಗುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.