ADVERTISEMENT

ವಿದೇಶಿ ಆಸ್ತಿ ಬಹಿರಂಗಪಡಿಸದ ವ್ಯಕ್ತಿಗಳಿಗೆ ಐಟಿ ಇಲಾಖೆಯಿಂದ ಇಮೇಲ್, ಎಸ್‌ಎಂಎಸ್

ಪಿಟಿಐ
Published 27 ನವೆಂಬರ್ 2025, 10:20 IST
Last Updated 27 ನವೆಂಬರ್ 2025, 10:20 IST
   

ನವದೆಹಲಿ: 2025-26ರ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳಲ್ಲಿ(ಐಟಿಆರ್‌) ಕೆಲ ವ್ಯಕ್ತಿಗಳು ವಿದೇಶಿ ಆಸ್ತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳದ ‘ಹೆಚ್ಚಿನ ಅಪಾಯದ’ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ತಿಳಿಸಿದೆ.

ದಂಡದ ಪರಿಣಾಮಗಳನ್ನು ತಪ್ಪಿಸಲು 2025ರ ಡಿಸೆಂಬರ್ 31ರೊಳಗೆ ಪರಿಷ್ಕೃತ ಐಟಿಆರ್‌ ಅನ್ನು ಸಲ್ಲಿಸಲು ಸಲಹೆ ನೀಡುವ ಮೂಲಕ ಇಲಾಖೆಯು ನವೆಂಬರ್ 28ರಿಂದ ಅಂತಹ ತೆರಿಗೆದಾರರಿಗೆ ಎಸ್‌ಎಂಎಸ್ ಮತ್ತು ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷವೂ ಆದಾಯ ತೆರಿಗೆ ರಿಟರ್ನ್‌ಗಳಲ್ಲಿ ವಿದೇಶಿ ಆಸ್ತಿ ಬಹಿರಂಗಪಡಿಸದ ಆಯ್ದ ತೆರಿಗೆ ಪಾವತಿದಾರರಿಗೆ ಇಲಾಖೆ ನೋಟಿಸ್ ಕಳುಹಿಸಿತ್ತು.

ADVERTISEMENT

ಈ ಕ್ರಮದಿಂದಾಗಿ 2024-25ನೇ ಸಾಲಿನಲ್ಲಿ 24,678 ತೆರಿಗೆದಾರರು ತಮ್ಮ ಐಟಿಆರ್‌ಗಳನ್ನು ಮರುಪರಿಶೀಲಿಸಿ ₹29,208 ಕೋಟಿ ಮೌಲ್ಯದ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಿ, ₹1,089.88 ಕೋಟಿ ವಿದೇಶಿ ಮೂಲ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ವಿದೇಶಗಳಲ್ಲಿ ಹೂಡಿಕೆ ಕುರಿತಂತೆ ಎಇಒಐ( ಸ್ವಯಂಚಾಲಿಯತ ಮಾಹಿತಿ ವಿನಿಮಯ) ವ್ಯವಸ್ಥೆ ಮೂಲಕ ಪಡೆದುಕೊಂಡ ಮಾಹಿತಿಗಳನ್ನು ವಿಶ್ಲೇಷಿಸಿದಾಗ ಬಹಿರಂಗಪಡಿಸದ ವಿದೇಶಿ ಆಸ್ತಿಗಳು ಇರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯು(ಸಿಬಿಡಿಟಿ) ಭಾರತೀಯ ನಿವಾಸಿಗಳ ವಿದೇಶಿ ಹಣಕಾಸು ಸ್ವತ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿದೇಶಿ ಖಾತೆ ತೆರಿಗೆ ಅನುಸರಣಾ ಕಾಯ್ದೆ(ಎಫ್‌ಎಟಿಸಿಎ) ಅಡಿಯಲ್ಲಿ ಪಡೆದುಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.