ADVERTISEMENT

ಗರಿಷ್ಠ ದರ: ಚಿನ್ನ ಖರೀದಿಗೆ ಹಿಂದೇಟು

ಪಿಟಿಐ
Published 25 ಜುಲೈ 2020, 11:05 IST
Last Updated 25 ಜುಲೈ 2020, 11:05 IST
ಚಿನ್ನಾಭರಣ
ಚಿನ್ನಾಭರಣ   

ಮುಂಬೈ: ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿರುವುದು ಹಾಗೂ ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಜನರು ಚಿನ್ನಾಭರಣ ಖರೀದಿಸುವ ಪ್ರಮಾಣ ಇನ್ನಷ್ಟು ಇಳಿಕೆಯಾಗಲಿದೆ ಎನ್ನುವುದು ಉದ್ಯಮದ ನಿರೀಕ್ಷೆಯಾಗಿದೆ.

ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಗರಿಷ್ಠ ಮಟ್ಟದಲ್ಲಿದೆ. ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಲು ಚಿನ್ನ ಖರೀದಿಗೆ ತೊಡಗಿಸುತ್ತಿದ್ದಾರೆ. ಇದರಿಂದಾಗಿಯೇ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

‘ಆರ್ಥಿಕ ಮಂದಗತಿ ಹಾಗೂ ಲಾಕ್‌ಡೌನ್‌ ನಿಯಮಗಳಿಂದಾಗಿ ಸದ್ಯ, ಶೇ 20–25ರಷ್ಟು ಮಾತ್ರವೇ ವಹಿವಾಟು ನಡೆಯುತ್ತಿದೆ. ಕೆಲ ದಿನಗಳಿಂದ ಬೆಲೆಯೂ ಹೆಚ್ಚಾಗುತ್ತಿರುವುದರಿಂದ ಜನರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ’ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭನ್‌ ಹೇಳಿದ್ದಾರೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ (28.34 ಗ್ರಾಂ) ಒಂಬತ್ತು ವರ್ಷಗಳ ಗರಿಷ್ಠ ಮಟ್ಟವಾದ 1,900 ಡಾಲರ್‌ಗಳಿಗೆ ತಲುಪಿದೆ.

‘ಸದ್ಯ ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಜನರು ಚಿನ್ನಾಭರಣ ಖರೀದಿಸುವ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ನವೆಂಬರ್‌ವರೆಗೂ ಚಿನ್ನದ ದರ ಏರುಮುಖವಾಗಿಯೇ ಇರುವ ನಿರೀಕ್ಷೆ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಚಿನ್ನದ ದರ ₹ 50 ಸಾವಿರ ದಾಟಿರುವುದು ಮಹತ್ವದ ಮೈಲಿಗಲ್ಲು. ಇದರಿಂದ, ಹೂಡಿಕೆದಾರರಿಗೆ ಸಂತೋಷವಾಗಿದೆ. ಆದರೆ, ಗ್ರಾಹಕರಿಗೆ ನಿರಾಸೆ ಮೂಡಿಸಿದೆ’ ಎಂದು ವಿಶ್ವ ಚಿನ್ನ ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌. ಹೇಳಿದ್ದಾರೆ.

‘2019ರ ಜನವರಿಯಿಂದ ಚಿನ್ನದ ದರದಲ್ಲಿ ಶೇ 60ರಷ್ಟು ಹೆಚ್ಚಾಗಿದೆ. 2019ರ ಆಗಸ್ಟ್‌ನಿಂದ ದರ ಏರಿಕೆಗೆ ವೇಗ ದೊರೆತಿದೆ. ವಾಣಿಜ್ಯ ಬಿಕ್ಕಟ್ಟು ಮತ್ತು ಗಡಿ ಸಂಘರ್ಷಗಳು ದೇಶಿ ಚಿನಿವಾರ ಪೇಟೆಯ ಮೇಲೆ ಪ್ರಭಾವ ಬೀರುತ್ತಿವೆ’ ಎಂದೂ ಹೇಳಿದ್ದಾರೆ.

₹ 65 ಸಾವಿರಕ್ಕೆ?: ‘ಲಾಕ್‌ಡೌನ್‌ನಿಂದಾಗಿ ಬೇಡಿಕೆ ಇಳಿಮುಖವಾಗಿದೆ. ಜನರು ಸಣ್ಣ ಪುಟ್ಟ ಆಭರಣಗಳನ್ನಷ್ಟೇ ಖರೀದಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಗರಿಷ್ಠ ಮಟ್ಟದಲ್ಲಿದೆ’ ಎಂದು ಪಿ.ಎನ್‌. ಗಾಡ್ಗೀಳ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌರಭ್‌ ಗಾಡ್ಗೀಳ್‌ ತಿಳಿಸಿದ್ದಾರೆ.

‘ಚಿನ್ನದ ದರ ಇನ್ನಷ್ಟು ಏರಿಕೆಯಾಗಲಿದೆ. ಅಮೆರಿಕದಲ್ಲಿ ಚುನಾವಣೆ ನಡೆಯಲಿರುವುದು, ಕೋವಿಡ್‌ ಸಂಬಂಧಿತ ತೊಡಕುಗಳು ಹಾಗೂ ಗಡಿ ಸಂಘರ್ಷಗಳಿಂದಾಗಿ 12 ತಿಂಗಳಿನಲ್ಲಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ 10 ಗ್ರಾಂಗೆ ₹ 65 ಸಾವಿರದ ಸಮೀಪಕ್ಕೆ ತಲುಪುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದ್ದಾರೆ.

ಶುಕ್ರವಾರದ ಧಾರಣೆ (10 ಗ್ರಾಂಗೆ)
ದೆಹಲಿ: ₹ 51,946
ಬೆಂಗಳೂರು:₹ 51,125
ಮುಂಬೈ:₹ 50,919

ಬೇಡಿಕೆ ತಗ್ಗಲು ಕಾರಣಗಳು
*
ಲಾಕ್‌ಡೌನ್‌ನಿಂದ ಕಡಿಮೆಯಾದ ಮದುವೆ ಸಮಾರಂಭ
*ಮದುವೆಗೆ ಸಂಬಂಧಿಸಿದ ಚಿನ್ನಾಭರಣ ಖರೀದಿ ಪ್ರಮಾಣ ಇಳಿಕೆ
*ಚಿನ್ನದ ದರ ಗರಿಷ್ಠ ಮಟ್ಟದಲ್ಲಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.