ನವದೆಹಲಿ : ದೂರಸಂಪರ್ಕ ಸೇವಾ ಕಂಪನಿ ಜಿಯೊ, 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ, ಈ ಕ್ಷೇತ್ರದಲ್ಲಿ ಜಾಗತಿಕ ನಾಯಕ ಆಗುವ ಗುರಿಯನ್ನು ಹೊಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ವರದಿ ತಿಳಿಸಿದೆ.
ಜಗತ್ತಿನಲ್ಲಿ ಮೊಬೈಲ್ ಮೂಲಕ ಇಂಟರ್ನೆಟ್ ಡೇಟಾ ಸೇವೆ ಒದಗಿಸುವ ಅತಿದೊಡ್ಡ ಕಂಪನಿಯಾಗಿರುವ ಜಿಯೊ, 17ಕ್ಕೂ ಹೆಚ್ಚು ಎಕ್ಸಾಬೈಟ್‌ನಷ್ಟು ಡೇಟಾವನ್ನು ಮಾಸಿಕವಾಗಿ ನಿರ್ವಹಿಸುತ್ತಿದೆ. ಭಾರತದಲ್ಲಿನ ವಯರ್‌ಲೆಸ್ ಡೇಟಾ ಬಳಕೆಯಲ್ಲಿ ಶೇ 60ರಷ್ಟು ಜಿಯೊ ಮೂಲಕ ಆಗುತ್ತಿದೆ.
‘ಕಂಪನಿಯು ಭವಿಷ್ಯದ ಸಂವಹನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. 6ಜಿ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
2016ರಲ್ಲಿ 4ಜಿ, 2018ರಲ್ಲಿ ಮನೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ, 2022ರಲ್ಲಿ 5ಜಿ ಮತ್ತು 2024ರಲ್ಲಿ ವಯರ್‌ಲೆಸ್ ಬ್ರಾಡ್‌ಬ್ಯಾಂಡ್ ಸಂಪರ್ಕ ಸೇವೆಯನ್ನು ಕಂಪನಿ ಆರಂಭಿಸಿದೆ.
ಕಂಪನಿಯು ತನ್ನದೇ ಆದ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ಆರಂಭಿಸುತ್ತಿದೆ. ಅಲ್ಲದೆ, ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಭಾರತದಲ್ಲಿನ ತನ್ನ ಗ್ರಾಹಕರಿಗೆ ಈ ಸೇವೆ ಒದಗಿಸಲು ನಿರ್ಧರಿಸಿದೆ.
2025ರ ಮಾರ್ಚ್ ವೇಳೆಗೆ ಕಂಪನಿಯು 19.1 ಕೋಟಿ 5ಜಿ ಬಳಕೆದಾರರನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.