ADVERTISEMENT

ಕರ್ನಾಟಕದಲ್ಲಿ GST ವಂಚನೆ 5 ‍ಪಟ್ಟು ಹೆಚ್ಚಳ: ಲೋಕಸಭೆಗೆ ನಿರ್ಮಲಾ ಮಾಹಿತಿ

ಪಿಟಿಐ
Published 11 ಆಗಸ್ಟ್ 2025, 10:59 IST
Last Updated 11 ಆಗಸ್ಟ್ 2025, 10:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ ₹39,577 ಕೋಟಿ ತೆರಿಗೆ ವಂಚನೆಯನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಸಂಸತ್ತಿಗೆ ಸೋಮವಾರ ಮಾಹಿತಿ ನೀಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಐದು ಪಟ್ಟು ಹೆಚ್ಚು.

ADVERTISEMENT

ಈ ಬಗ್ಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಯುಪಿಐ ವ್ಯವಹಾರ ಆಧಾರವಾಗಿಟ್ಟುಕೊಂಡು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಯಾವುದೇ ನೋಟಿಸ್ ಜಾರಿ ಮಾಡಿಲ್ಲ’ ಎಂದು ಹೇಳಿದ್ದಾರೆ.

ವ್ಯವಹಾರಗಳ ಮೌಲ್ಯಮಾಪನ ಮಾಡದೆ ಕರ್ನಾಟಕ ಸೇರಿ ದೇಶದಲ್ಲಿ ಸಣ್ಣ ವರ್ತಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಕಳೆದ ತಿಂಗಳು ಬೆಂಗಳೂರಿನ ಹಲವು ಸಣ್ಣ ವರ್ತಕರಿಗೆ ಅವರ ಯುಪಿಐ ವಹಿವಾಟುಗಳನ್ನು ಆಧರಿಸಿ ಭಾರಿ ಪ್ರಮಾಣದ ಜಿಎಸ್‌ಟಿ ಪಾವತಿ ಮಾಡಬೇಕು ಎಂದು ಜಿಎಸ್‌ಟಿ ರಾಜ್ಯ ಕ್ಷೇತ್ರಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.

ಕರ್ನಾಟಕದಲ್ಲಿ ಪತ್ತೆಯಾದ ಜಿಎಸ್‌ಟಿ ವಂಚನೆಯ ವಿವರಗಳ ಕುರಿತಾದ ಮತ್ತೊಂದು ಪ್ರಶ್ನೆಗೂ ಅವರು ಉತ್ತರಿಸಿದ್ದು, 2024–25ರಲ್ಲಿ ಈ ಸಂಬಂಧ 1,254 ಪ್ರಕರಣಗಳು ದಾಖಲಾಗಿವೆ. ₹ 39,577 ತೆರಿಗೆ ವಂಚನೆಯನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 9 ಮಂದಿಯನ್ನು ಬಂಧಿಸಲಾಗಿದೆ. ₹ 1,623 ಕೋಟಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2023–24ರಲ್ಲಿ ₹ 7,202 ಕೋಟಿ ತೆರಿಗೆ ವಂಚನೆ ಬಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ₹ 1,197 ಕೋಟಿಯನ್ನು ಸ್ವಯಂ ತೆರಿಗೆ ಪಾವತಿ ಮೂಲಕ ವಸೂಲಿ ಮಾಡಲಾಗಿದೆ

2022–23ರಲ್ಲಿ ₹ 25,839 ಕೋಟಿಯ 959 ತೆರಿಗೆ ವಂಚನೆ ಪ್ರಕರಣಗಳನ್ನು ಸಿಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ₹ 1,705 ಕೋಟಿ ತೆರಿಗೆಯನ್ನು ಕಟ್ಟಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.