ADVERTISEMENT

ರಫ್ತಿನಲ್ಲಿ ಕರ್ನಾಟಕದ್ದೇ ಸಿಂಹಪಾಲು: ಪೀಯೂಷ್‌ ಗೋಯಲ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 21:01 IST
Last Updated 12 ಫೆಬ್ರುವರಿ 2025, 21:01 IST
   

ಬೆಂಗಳೂರು: ‘ಭಾರತದ ವಾರ್ಷಿಕ ರಫ್ತು ಮೊತ್ತ ₹70 ಲಕ್ಷ ಕೋಟಿಯ ಗುರಿ ಮುಟ್ಟಿದೆ. ಅದರಲ್ಲಿ ಕರ್ನಾಟಕದ್ದೇ ಸಿಂಹಪಾಲು. ಆರ್ಥಿಕ ಅಭಿವೃದ್ಧಿ ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೇ ಸಾಗಬೇಕಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಹೇಳಿದರು. 

ರಾಜ್ಯದ ಅಭಿವೃದ್ಧಿಯಲ್ಲಿ ಭಾಗಿಯಾದ ಉದ್ಯಮಿಗಳಿಗೆ ‘ಇನ್ವೆಸ್ಟ್‌ ಕರ್ನಾಟಕ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ನೂರಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅವುಗಳ ಎಲ್ಲ ಪ್ರಯೋಜನ ಕರ್ನಾಟಕಕ್ಕೂ ದೊರೆಯಲಿದೆ’ ಎಂದರು.

‘ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕರ್ನಾಟಕಕ್ಕೆ ಬಂಡವಾಳ ಆಕರ್ಷಣೆ, ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ನೆರವನ್ನು ಕೇಂದ್ರ ನೀಡಲಿದೆ. ರಾಜ್ಯದ ಕೈಗಾರಿಕಾ ನೀತಿಗಳು ಉದ್ಯಮಸ್ನೇಹಿಯಾಗಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿವೆ’ ಎಂದರು.

ADVERTISEMENT

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡು ಕೈಗಾರಿಕಾ ನೀತಿಯನ್ನು ರೂಪಿಸಲಾಗಿದೆ. ಇದರಿಂದ ರಾಜ್ಯದ ಎಲ್ಲೆಡೆ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಕರ್ನಾಟಕದ ಆರ್ಥಿಕ ಅಭಿವೃದ್ಧಿಯಲ್ಲಿ ಬೆಂಗಳೂರಿಗೆ ಮಹತ್ವದ ಸ್ಥಾನವಿದೆ. ಆದರೆ ಇಲ್ಲಿನ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆ ಎಂಬ ಮಾತು ಇದ್ದೇ ಇದೆ. ಅದನ್ನು ನಿವಾರಿಸಲು ₹1 ಲಕ್ಷ ಕೋಟಿ ವಿನಿಯೋಗಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.