ADVERTISEMENT

ತಂತ್ರಜ್ಞಾನ ಆಧರಿತ ನವೋದ್ಯಮಗಳಲ್ಲಿ ತಗ್ಗಿದ ಹೂಡಿಕೆ

ಪಿಟಿಐ
Published 16 ಏಪ್ರಿಲ್ 2025, 15:59 IST
Last Updated 16 ಏಪ್ರಿಲ್ 2025, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕರ್ನಾಟಕದ ತಂತ್ರಜ್ಞಾನ ಆಧರಿತ ನವೋದ್ಯಮಗಳಲ್ಲಿ (ಟೆಕ್‌ ಸ್ಟಾರ್ಟ್‌ಅಪ್‌) ವೆಂಚರ್‌ ಕ್ಯಾಪಿಟಲ್ ಹೂಡಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ಸಂಗ್ರಹಣಾ ಸಂಸ್ಥೆ ಟ್ರ್ಯಾಕ್ಸನ್ ವರದಿ ಬುಧವಾರ ತಿಳಿಸಿದೆ.

2024ರ ನಾಲ್ಕನೇ (ಅಕ್ಟೋಬರ್‌ನಿಂದ ಡಿಸೆಂಬರ್‌) ತ್ರೈಮಾಸಿಕದಲ್ಲಿ ಟೆಕ್‌ ನವೋದ್ಯಮಗಳು ₹7,071 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ₹5,422 ಕೋಟಿ  ಸಂಗ್ರಹಿಸಿವೆ. ಒಟ್ಟಾರೆ ಬಂಡವಾಳ ಸಂಗ್ರಹದಲ್ಲಿ ಶೇ 23ರಷ್ಟು ಇಳಿಕೆಯಾಗಿದೆ ಎಂದು ವರದಿಯು ವಿವರಿಸಿದೆ.

2024ರ ಮೊದಲ ತ್ರೈಮಾಸಿಕದಲ್ಲಿ ಟೆಕ್‌ ನವೋದ್ಯಮಗಳು ₹10,280 ಕೋಟಿ ಬಂಡವಾಳ ಸಂಗ್ರಹಿಸಿದ್ದವು ಎಂದು ಹೇಳಿದೆ.

ADVERTISEMENT

1 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಿಂತ ಹೆಚ್ಚಿನ (ಅಂದಾಜು ₹8,568 ಕೋಟಿ) ಮಾರುಕಟ್ಟೆ ಬಂಡವಾಳ ಹೊಂದಿರುವ ನವೋದ್ಯಮ ಕಂಪನಿಯನ್ನು ‘ಯೂನಿಕಾರ್ನ್‌’ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಹಲವು ಯೂನಿಕಾರ್ನ್‌ಗಳಿವೆ. ಮೊದಲ ತ್ರೈಮಾಸಿಕದಲ್ಲಿ ಯಾವುದೇ ಹೊಸ ಅಥವಾ ಹಾಲಿ ಇರುವ ಯೂನಿಕಾರ್ನ್‌ಗಳು ಸಂಗ್ರಹಿಸಿರುವ ಬಂಡವಾಳ ಮೊತ್ತವು ₹850 ಕೋಟಿ ದಾಟಿಲ್ಲ ಎಂದು ಹೇಳಿದೆ.

ತಂತ್ರಜ್ಞಾನ ಆಧರಿತ ನವೋದ್ಯಮಗಳಿಗೆ ಹೋಲಿಸಿದರೆ ಫಿನ್‌ಟೆಕ್‌ ಮತ್ತು ರಿಟೇಲ್‌ ವಲಯದ ನವೋದ್ಯಮಗಳ ಬಂಡವಾಳ ಸಂಗ್ರಹ ಸದೃಢವಾಗಿದೆ ಎಂದು ತಿಳಿಸಿದೆ. 

ನವೋದ್ಯಮಗಳಿಗೆ ಆರ್ಥಿಕ ಬಲ ತುಂಬಲು ಆರಂಭಿಕ ಬಂಡವಾಳ (ಸೀಡ್‌ ಫಂಡ್‌) ಒದಗಿಸಲಾಗುತ್ತದೆ. ಸೀಡ್‌ ಫಂಡ್‌ ನೀಡಿಕೆಯಲ್ಲೂ ಇಳಿಕೆಯಾಗಿದೆ. ಒಟ್ಟು ₹490 ಕೋಟಿ ನೀಡಲಾಗಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 14ರಷ್ಟು ಇಳಿಕೆಯಾಗಿದೆ ಎಂದು ವಿವರಿಸಿದೆ.

ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ನವೋದ್ಯಮಗಳ ಬಂಡವಾಳ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವಲಯದ ನವೋದ್ಯಮಗಳು ₹2,558 ಕೋಟಿ, ಫಿನ್‌ಟೆಕ್‌ ನವೋದ್ಯಮ ₹1,894 ಕೋಟಿ ಹಾಗೂ ರಿಟೇಲ್‌ ವಲಯದ ನವೋದ್ಯಮಗಳು ₹1,880 ಕೋಟಿ ಬಂಡವಾಳ ಸಂಗ್ರಹಿಸಿವೆ.

ನವೋದ್ಯಮಗಳ ವಿಲೀನ ಮತ್ತು ಸ್ವಾಧೀನಪಡಿಸಿಕೊಳ್ಳುವಿಕೆಯಲ್ಲಿಯೂ ಏರಿಕೆಯಾಗಿದೆ. 21 ಟೆಕ್‌ ನವೋದ್ಯಮಗಳು ಈ ತ್ರೈಮಾಸಿಕದಲ್ಲಿ ವಿಲೀನಗೊಂಡಿವೆ. ಅಮೆಜಾನ್‌ ಕಂಪನಿಯು ₹1,285 ಕೋಟಿಗೆ ಫಿನ್‌ಟೆಕ್‌ ನವೋದ್ಯಮ ಆಕ್ಸಿಯೊ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ.  

ಬೆಂಗಳೂರು ನವೋದ್ಯಮಗಳ ತವರೂರು ಆಗಿದೆ. ಆಕ್ಸಿಲ್‌, ಬ್ಲೂಮ್ ವೆಂಚರ್ಸ್‌ ಮತ್ತು ಸಿಕ್ವೊಯಾ ಕ್ಯಾಪಿಟಲ್‌ ಕಂಪನಿಯು, ಕರ್ನಾಟಕದ ಟೆಕ್‌ ನವೋದ್ಯಮಗಳಲ್ಲಿ ಹೂಡಿಕೆ ಮಾಡಿರುವ ಪ್ರಮುಖ ವೆಂಚರ್ ಕ್ಯಾಪಿಟಲ್‌ ಕಂಪನಿಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.