ADVERTISEMENT

ಕೆಎಸ್‌ಡಿಎಲ್‌ 21 ನೂತನ ಉತ್ಪನ್ನ ಬಿಡುಗಡೆ

ಗುಣಮಟ್ಟ ಕಾಯ್ದುಕೊಂಡರಷ್ಟೇ ಲಾಭ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 16:35 IST
Last Updated 20 ಜನವರಿ 2024, 16:35 IST
ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಸ್‌ಡಿಎಲ್‌  ಸಿದ್ಧಪಡಿಸಿದ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಸಚಿವ ಎಂ.ಬಿ. ಪಾಟೀಲ ಇದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಸ್‌ಡಿಎಲ್‌  ಸಿದ್ಧಪಡಿಸಿದ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಸಚಿವ ಎಂ.ಬಿ. ಪಾಟೀಲ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಖಾಸಗಿ ಸಂಸ್ಥೆಗಳ ಜತೆಗೆ ಪೈಪೋಟಿ ನಡೆಸುವಂತಹ ಗುಣಮಟ್ಟ ಕಾಯ್ದುಕೊಂಡರೆ ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳೂ ಲಾಭದತ್ತ ಸಾಗಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಸಿದ್ಧಪಡಿಸಿದ ಪ್ರೀಮಿಯಂ ಮೈಸೂರು ಸ್ಯಾಂಡಲ್ ಸಾಬೂನುಗಳು, ಶವರ್ ಜೆಲ್, ಸೋಪ್ ಕಿಟ್‌, ಹ್ಯಾಂಡ್ ವಾಶ್‌, ಕುಡಿಯುವ ನೀರಿನ ಬಾಟಲ್‌ ಸೇರಿದಂತೆ 21 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೆಎಸ್‌ಡಿಎಲ್‌ ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ಸಿದ್ಧಗೊಳಿಸುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹132 ಕೋಟಿ ಲಾಭ ಮಾಡಿತ್ತು. ಎಂ.ಬಿ. ಪಾಟೀಲರ ಆಸಕ್ತಿ, ಶ್ರಮದ ಫಲವಾಗಿ ಕಳೆದ ಎಂಟು ತಿಂಗಳಲ್ಲಿ ₹182 ಕೋಟಿ ಲಾಭಗಳಿಸಿದೆ ಎಂದು ಶ್ಲಾಘಿಸಿದರು. 

ADVERTISEMENT

ಕೆಎಸ್‌ಡಿಎಲ್‌ ಉತ್ಪನ್ನಗಳನ್ನು ನಕಲು ಮಾಡುವ ಜಾಲವನ್ನು ಹೈದರಾಬಾದ್‌ನಲ್ಲಿ ಈಚೆಗೆ ಪತ್ತೆ ಮಾಡಲಾಗಿದೆ. ಇಂತಹ ಜಾಲಗಳ ಮೇಲೆ ನಿಗಾ ಇಡಬೇಕು. ಇಲ್ಲದಿದ್ದರೆ ನಿಗಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಸಿದರು.

ಕೆಎಸ್‌ಡಿಎಲ್‌ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ನಿಗಮದ ವಹಿವಾಟು ಸದ್ಯಕ್ಕೆ ₹1,400 ಕೋಟಿ ಇದೆ. ಮುಂದಿನ ಎರಡು ವರ್ಷಗಳಲ್ಲಿ ₹3 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಉತ್ಪಾದನೆಯ ಪ್ರಮಾಣ ಈಗಾಗಲೇ ಶೇ 25ರಷ್ಟು ಹೆಚ್ಚಾಗಿದೆ. ಸುಗಂಧ ಭರಿತ ಉತ್ಪನ್ನಗಳ ತಯಾರಿಕೆ ಶೀಘ್ರ ಆರಂಭವಾಗಲಿದೆ ಎಂದರು.

ಅಮೆರಿಕ, ಯೂರೋಪ್‌ ಮತ್ತು ದಕ್ಷಿಣ ಆಫ್ರಿಕಾಗಳಲ್ಲೂ ಬೇಡಿಕೆ ಇದೆ. ಅಂತರರಾಷ್ಟ್ರೀಯ ವಹಿವಾಟು ₹25 ಕೋಟಿ ಇದೆ. ಸಂಸ್ಥೆಯ ಉತ್ಪನ್ನಗಳ ನಕಲು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ಸಮಾಲೋಚಕ ರಜನೀಕಾಂತ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.