ADVERTISEMENT

ಮಾರ್ಚ್‌ನಲ್ಲಿ ಅಖಿಲ ಭಾರತ ಮಟ್ಟದ ನಾಲ್ಕು ಕಾರ್ಮಿಕರ ಸಮೀಕ್ಷೆ

ಪಿಟಿಐ
Published 30 ಡಿಸೆಂಬರ್ 2020, 16:13 IST
Last Updated 30 ಡಿಸೆಂಬರ್ 2020, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ‘ಕಾರ್ಮಿಕ ಬ್ಯೂರೊ’, ಕಾರ್ಮಿಕರಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ ನಾಲ್ಕು ಸಮೀಕ್ಷೆಗಳನ್ನು ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಿದೆ. ವಲಸೆ ಕಾರ್ಮಿಕರ, ಮನೆಗೆಲಸ ಮಾಡುವವರ, ಸಾರಿಗೆ ವಲಯದಲ್ಲಿ ಕೆಲಸ ಮಾಡುವವರ ಸಮೀಕ್ಷೆ ಹಾಗೂ ವೃತ್ತಿಪರರು ಸೃಷ್ಟಿಸಿದ ಉದ್ಯೋಗಗಳ ಸಮೀಕ್ಷೆಯನ್ನು ಈ ಬ್ಯೂರೊ ನಡೆಸಲಿದೆ.

ಸಮೀಕ್ಷೆಯ ಫಲಿತಾಂಶವು ಅಕ್ಟೋಬರ್‌ ವೇಳೆಗೆ ಸಿಗಲಿದೆ. ಸಮೀಕ್ಷೆ ನಡೆಸುವ ಹೊಣೆಯನ್ನು ಬ್ಯೂರೊಕ್ಕೆ ಈಗಾಗಲೇ ವಹಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

ಕಾರ್ಮಿಕರ ಅಭಿವೃದ್ಧಿಗಾಗಿ ಯೋಜನೆ ರೂಪಿಸುವಾಗ, ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರಿಗೆ ಸಂಬಂಧಿಸಿದ ಖಚಿತ ಅಂಕಿ–ಅಂಶಗಳ ಅಗತ್ಯ ಇದೆ ಎಂದು ಅವರು ಬ್ಯೂರೊದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕಂಪನಿಗಳಲ್ಲಿನ ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ತ್ರೈಮಾಸಿಕ ಸಮೀಕ್ಷೆಗೆ ಕೂಡ ಬ್ಯೂರೊ ಶೀಘ್ರವೇ ಚಾಲನೆ ನೀಡಲಿದೆ. ಈ ಸಮೀಕ್ಷೆಯು ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿನ ಉದ್ಯೋಗದ ಬಗ್ಗೆ ವಿಸ್ತೃತ ಅಂಕಿ–ಅಂಶಗಳನ್ನು ಒದಗಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವೊಂದನ್ನು ಈ ಕಾರ್ಯಕ್ರಮದಲ್ಲಿ ಓದಿ ಹೇಳಲಾಯಿತು. ‘ಐತಿಹಾಸಿಕವಾಗಿರುವ ಮೂರು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ಉತ್ಪಾದಕತೆಯನ್ನು ಹೆಚ್ಚಿಸಲು ಕೂಡ ನೆರವಾಗುತ್ತವೆ’ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.