ADVERTISEMENT

ಮಾರ್ಪಡಿಸಿದ ಪ್ರಧಾನಮಂತ್ರಿ ವಯ ವಂದನಾ ಯೋಜನೆಗೆ ಎಲ್‌ಐಸಿ ಚಾಲನೆ

ಪಿಟಿಐ
Published 26 ಮೇ 2020, 13:00 IST
Last Updated 26 ಮೇ 2020, 13:00 IST
ವಯ ವಂದನಾಯೋಜನೆ
ವಯ ವಂದನಾಯೋಜನೆ   

ಮುಂಬೈ: ಕೇಂದ್ರ ಸರ್ಕಾರ ಮಾರ್ಪಡಿಸಿರುವ ‘ಪ್ರಧಾನಮಂತ್ರಿ ವಯ ವಂದನಾ ಯೋಜನೆ’ಗೆ (ಪಿಎಂವಿವಿವೈ) ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಚಾಲನೆ ನೀಡಿದೆ.

ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹಣ ತೊಡಗಿಸಿ ಪಿಂಚಣಿ ಪಡೆಯಲು ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಈ ಯೋಜನೆಯನ್ನು ಈಗ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿದೆ.2023ರ ಮಾರ್ಚ್‌ ಅಂತ್ಯದವರೆಗೆ ಈ ಯೋಜನೆಯು ಚಾಲ್ತಿಯಲ್ಲಿ ಇರಲಿದೆ. ಆಸಕ್ತರು ಎಲ್‌ಐಸಿ ಅಂತರ್ಜಾಲ ತಾಣದ ಮೂಲಕ ಮತ್ತು ಕಚೇರಿಗಳನ್ನು ಸಂಪರ್ಕಿಸಿ (ಆಫ್‌ಲೈನ್‌) ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಹಿರಿಯ ನಾಗರಿಕರೊಬ್ಬರು ಗರಿಷ್ಠ ₹15 ಲಕ್ಷದವರೆಗೆ ಹಣ ಹೂಡಿಕೆ ಮಾಡಿಮರು ತಿಂಗಳಿನಿಂದ ಹತ್ತು ವರ್ಷಗಳವರೆಗೆ ಪಿಂಚಣಿ ಪಡೆಯುವ ಸೌಲಭ್ಯ ಇದಾಗಿದೆ. ಶೇ 7.40ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.

ADVERTISEMENT

ಮುಂದಿನ ಎರಡು ಹಣಕಾಸು ವರ್ಷಗಳಿಗೆ ಖಾತರಿದಾಯಕ ಬಡ್ಡಿ ದರವನ್ನು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ನಿರ್ಧರಿಸಲಾಗುವುದು ಎಂದು ಎಲ್‌ಐಸಿ ತಿಳಿಸಿದೆ.

ಪಿಂಚಣಿ ಯೋಜನೆ ಖರೀದಿಸುವ (ಹಣ ತೊಡಗಿಸುವ) ಸಂದರ್ಭದಲ್ಲಿಯೇ ತಿಂಗಳ, ಮಾಸಿಕ ಮತ್ತು ಅರ್ಧವಾರ್ಷಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳಬೇಕು.

ಈ ಯೋಜನೆಯಡಿ ಗರಿಷ್ಠ ಮಾಸಿಕ ಪಿಂಚಣಿ ಮೊತ್ತವು ₹9,250 ಇರಲಿದೆ. ಪಾಲಿಸಿ ಅವಧಿಯಲ್ಲಿ ಒಂದು ವೇಳೆ ಪಿಂಚಣಿದಾರರು ಮೃತಪಟ್ಟರೆ ಯೋಜನೆ ಖರೀದಿಸಲು ತೊಡಗಿಸಿದ ಮೊತ್ತವನ್ನು ನಾಮಿನಿಗೆ ಅಥವಾ ಉತ್ತರಾಧಿಕಾರಿಗಳಿಗೆ ಮರಳಿಸಲಾಗುವುದು. ಪಾಲಿಸಿ ಅವಧಿ ಮುಗಿದ ನಂತರವೂ ಪಿಂಚಣಿದಾರರು ಬದುಕಿ ಉಳಿದಿದ್ದರೆ ತೊಡಗಿಸಿದ ಪೂರ್ಣ ಮೊತ್ತ ಮತ್ತು ಅಂತಿಮ ಕಂತನ್ನು ಪಾವತಿಸಲಾಗುವುದು.

ಮೂರು ವರ್ಷಗಳ ನಂತರ ತೊಡಗಿಸಿದ ಮೊತ್ತದ ಶೇ 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಬಹುದು. ಪಿಂಚಣಿದಾರರ ಇಲ್ಲವೆ ಸಂಗಾತಿಯ ಗಂಭೀರ ಸ್ವರೂಪದ ಕಾಯಿಲೆಯ ಚಿಕಿತ್ಸಾ ವೆಚ್ಚಕ್ಕೆಂದು ಅವಧಿ ಪೂರ್ಣಗೊಳ್ಳುವ ಮೊದಲೇ ಹೂಡಿಕೆ ಹಣ ಹಿಂದೆ ಪಡೆಯಲೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.