
ನವದೆಹಲಿ: ಹಬ್ಬಗಳ ಸಂದರ್ಭದಲ್ಲಿ ಎರಡು ಅಂಕಿಗಳ ಬೆಳವಣಿಗೆಯನ್ನು ಕಂಡಿದ್ದ ಮದ್ಯ ಉದ್ಯಮವು ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಶೇಕಡ 20ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯನ್ನು ಹೊಂದಿದೆ. ಪ್ರೀಮಿಯಂ ವರ್ಗದ ಮದ್ಯಕ್ಕೆ ಉತ್ತಮ ಬೇಡಿಕೆ ಇರುವುದು ಈ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ ಎಂಬುದು ಉದ್ಯಮದ ನಂಬಿಕೆ.
ಒಂದೂವರೆ ತಿಂಗಳ ಅವಧಿಯ ಹಬ್ಬಗಳ ಋತುವಿನಲ್ಲಿ ಮದ್ಯ ಉದ್ಯಮವು ವಿಸ್ಕಿ, ರಮ್, ವೊಡ್ಕಾ, ಜಿನ್, ಟಕಿಲಾ ಮಾರಾಟದಲ್ಲಿ ಹೆಚ್ಚಳ ದಾಖಲಿಸಿದೆ. ಈ ಬಾರಿಯ ಹಬ್ಬಗಳ ಋತುವಿನಲ್ಲಿ ಪ್ರೀಮಿಯಂ ವರ್ಗದ ಮದ್ಯ ಮಾರಾಟದಲ್ಲಿ, ಎರಡು ಹಾಗೂ ಮೂರನೆಯ ಹಂತಗಳಲ್ಲಿ ಮಾರುಕಟ್ಟೆಗಳಲ್ಲಿ ಮಾರಾಟ ಏರಿಕೆ ಆಗಿದೆ. ದೊಡ್ಡ ಮಾರುಕಟ್ಟೆಗಳಲ್ಲಿಯೂ ಮಾರಾಟ ಪ್ರಮಾಣವು ಏರಿಕೆ ಕಂಡಿದೆ.
‘ಗ್ರಾಹಕರು ಪ್ರೀಮಿಯಂ ವರ್ಗದ ಮದ್ಯವನ್ನು ಹೆಚ್ಚಾಗಿ ಬಯಸುತ್ತಿದ್ದಾರೆ ಎಂಬುದನ್ನು ಈ ಬಾರಿ ಹಬ್ಬಗಳ ಸಂದರ್ಭದಲ್ಲಿನ ಮಾರಾಟವು ಮತ್ತೊಮ್ಮೆ ಹೇಳಿದೆ’ ಎಂದು ರ್‍ಯಾಡಿಕೊ ಖೇತಾನ್ ಕಂಪನಿಯ ಸಿಒಒ ಅಮರ್ ಸಿಂಗ್ ಹೇಳಿದ್ದಾರೆ.
ಗ್ರಾಹಕರು ವೆಚ್ಚ ಮಾಡುವುದು ಹೆಚ್ಚಾಗುತ್ತಿರುವುದು, ಜನರ ಕೈಯಲ್ಲಿ ಖರ್ಚಿಗೆ ಹೆಚ್ಚು ಹಣ ಉಳಿಯುತ್ತಿರುವುದು ಮತ್ತು ಯುವ ಗ್ರಾಹಕರ ಸಮೂಹವು ಇರುವ ಕಾರಣದಿಂದಾಗಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿಯೂ ಮದ್ಯ ಮಾರಾಟದಲ್ಲಿ ಹೆಚ್ಚಳವು ಚೆನ್ನಾಗಿ ಇರಲಿದೆ ಎಂದು ಉದ್ಯಮವು ಭಾವಿಸಿದೆ.
ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಮದ್ಯ ಮಾರಾಟವು ಶೇ 20ರವರೆಗೆ ಹೆಚ್ಚಳ ಕಾಣಬಹುದು ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟದ (ಸಿಐಎಬಿಸಿ) ಮಹಾನಿರ್ದೇಶಕ ಅನಂತ ಎಸ್. ಅಯ್ಯರ್ ಹೇಳಿದ್ದಾರೆ. ಮುಂಗಾರು ಮಳೆ ಚೆನ್ನಾಗಿ ಆಗಿರುವುದು ಹಾಗೂ ಆರ್ಥಿಕ ಮುನ್ನೋಟ ಉತ್ತಮವಾಗಿರುವುದು ಮಾರಾಟ ಹೆಚ್ಚಲು ಕಾರಣವಾಗಲಿವೆ ಎಂದು ಅವರು ಭಾವಿಸಿದ್ದಾರೆ.
ಜಿಎಸ್‌ಟಿ ದರವನ್ನು ಇಳಿಕೆ ಮಾಡಿದ ಪರಿಣಾಮವಾಗಿ ಗ್ರಾಹಕರ ಕೈಯಲ್ಲಿ ತುಸು ಹೆಚ್ಚು ಹಣ ಉಳಿಯುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳ ಖರೀದಿ ಹೆಚ್ಚಾಗಿದೆ. ಈ ನಡುವೆ ಮದ್ಯ ಮಾರಾಟ ಕೂಡ ಜಾಸ್ತಿ ಆಗಿದೆ ಎಂದು ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್‌ಡಬ್ಲ್ಯುಎಐ) ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.