ಮುಂಬೈ: 2024–25ರ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ದೇಶದ ಹತ್ತಿ ರಫ್ತು 13 ಲಕ್ಷ ಬೇಲ್‌ನಷ್ಟು ಇಳಿಕೆಯಾಗಲಿದೆ ಎಂದು ಭಾರತೀಯ ಹತ್ತಿ ಬೆಳೆಗಾರರ ಒಕ್ಕೂಟ (ಸಿಎಐ) ಅಂದಾಜಿಸಿದೆ.
2023–24ರ ಇದೇ ಅವಧಿಯಲ್ಲಿ ರಫ್ತು ಪ್ರಮಾಣ 28.36 ಲಕ್ಷ ಬೇಲ್‌ನಷ್ಟಿತ್ತು. ಇದು ಪ್ರಸಕ್ತ ಅವಧಿಯಲ್ಲಿ 15 ಲಕ್ಷ ಬೇಲ್‌ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ 13.36 ಲಕ್ಷ ಬೇಲ್‌ಗಳಷ್ಟು ಕಡಿಮೆಯಾಗಲಿದೆ. ಬೆಲೆ ಇಳಿಕೆ ಮತ್ತು ಉತ್ಪಾದನೆಯಲ್ಲಿ ಕುಂಠಿತವಾಗಿರುವುದೇ ರಫ್ತು ಇಳಿಕೆಗೆ ಕಾರಣ ಎಂದು ಸೋಮವಾರ ತಿಳಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಜಿಲ್ ದೇಶದ ಹತ್ತಿಗೆ ಕಡಿಮೆ ದರವಿದೆ. ಇದು ಭಾರತಕ್ಕಿಂತ ಶೇ 7ರಷ್ಟು ಕಡಿಮೆ. ಅಲ್ಲದೆ, ದೇಶದ ಉತ್ಪಾದನೆಯು ಶೇ 11ಕ್ಕಿಂತಲೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಆಮದು ಪ್ರಮಾಣ ಹೆಚ್ಚಳವಾಗಿದ್ದು, ದೇಶದ ರಫ್ತು ಕಡಿಮೆಯಾಗಿದೆ ಎಂದು ಸಿಎಐ ಅಧ್ಯಕ್ಷ ಅತುಲ್ ಎಸ್ ಗಣತ್ರಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಸಕ್ತ ಋತುವಿನಲ್ಲಿ 33 ಲಕ್ಷ ಬೇಲ್ ಆಮದಾಗುವ ಅಂದಾಜು ಇದೆ. ಇದು ಕಳೆದ ಋತುವಿಗೆ ಹೋಲಿಸಿದರೆ 17.80 ಲಕ್ಷ ಬೇಲ್‌ನಷ್ಟು ಹೆಚ್ಚು. ದೇಶದ ಒಟ್ಟು ಹತ್ತಿ ಉತ್ಪಾದನೆಯು 291 ಲಕ್ಷ ಬೇಲ್ ಆಗಬಹುದು. ಹಿಂದಿನ ಇದೇ ಅವಧಿಯಲ್ಲಿ 327 ಲಕ್ಷ ಬೇಲ್‌ನಷ್ಟಿತ್ತು ಎಂದು ಹೇಳಿದ್ದಾರೆ.
ಏಪ್ರಿಲ್ ಅಂತ್ಯದವರೆಗೆ ಹತ್ತಿ ಬಳಕೆ 185 ಲಕ್ಷ ಬೇಲ್ ಮತ್ತು ರಫ್ತು 10 ಲಕ್ಷ ಬೇಲ್‌ಗಳೆಂದು ಅಂದಾಜಿಸಲಾಗಿದೆ. 130 ಲಕ್ಷ ಬೇಲ್‌ಗಳ ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜವಳಿ ಗಿರಣಿಗಳಲ್ಲಿ 35 ಲಕ್ಷ ಬೇಲ್‌ಗಳು ಮತ್ತು ಉಳಿದ 95 ಲಕ್ಷ ಬೇಲ್‌ಗಳು ಭಾರತೀಯ ಹತ್ತಿ ನಿಗಮ, ಮಹಾರಾಷ್ಟ್ರ ಫೆಡರೇಷನ್ ಮತ್ತು ಇತರರ ಬಳಿ (ಕಂಪನಿಗಳು, ವ್ಯಾಪಾರಿಗಳು, ರಫ್ತುದಾರರು, ಇತರರು) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.