ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ: ‘2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ನಿರೀಕ್ಷೆಗಿಂತಲೂ ಶೇ 5.4ರಷ್ಟು ಕಡಿಮೆ ದಾಖಲಾಗಿದೆ. ಇದು ಅಲ್ಪ ಪ್ರಮಾಣದ ಕುಸಿತವಷ್ಟೇ. ಮುಂಬರುವ ತ್ರೈಮಾಸಿಕಗಳಲ್ಲಿ ಉತ್ತಮ ಪ್ರಗತಿ ಕಾಣಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಪೂರಕ ಬೇಡಿಕೆಗಳ ಕುರಿತ ಅನುದಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಭಾರತದ ಜಿಡಿಪಿ ಬೆಳವಣಿಗೆಯು ಸ್ಥಿರ ಹಾಗೂ ಸುಸ್ಥಿರವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಜಿಡಿಪಿ ಶೇ 8.3ರಷ್ಟು ದಾಖಲಾಗಿರುವುದೇ ಇದಕ್ಕೆ ಸಾಕ್ಷಿ’ ಎಂದರು.
ಮೊದಲ ತ್ರೈಮಾಸಿಕದಲ್ಲಿ ಶೇ 6.7 ಹಾಗೂ ಎರಡನೇ ತ್ರೈಮಾಸಿಕದಲ್ಲಿ ಶೇ 5.4ರಷ್ಟು ದಾಖಲಾಗಿದೆ. ಎರಡನೇ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಸವಾಲಿನಿಂದ ಕೂಡಿತ್ತು. ಇದು ಭಾರತಕ್ಕಷ್ಟೇ ಸೀಮಿತವಾಗಿರಲಿಲ್ಲ. ವಿಶ್ವದ ಇತರೆ ದೇಶಗಳು ಈ ಸವಾಲು ಎದುರಿಸಿವೆ ಎಂದರು.
ಭಾರತವು ಜಾಗತಿಕ ಮಟ್ಟದಲ್ಲಿ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಇದರ ಶ್ರೇಯ ಎಲ್ಲಾ ಭಾರತೀಯರಿಗೂ ಸಲ್ಲಬೇಕಿದೆ ಎಂದು ಹೇಳಿದರು.
ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಕುಗ್ಗಿಲ್ಲ. 23 ತಯಾರಿಕಾ ವಿಭಾಗಗಳ ಪೈಕಿ ಬೆರಳೆಣಿಕೆಯಷ್ಟು ವಿಭಾಗದಲ್ಲಿ ಚಟುವಟಿಕೆ ಮಂದಗತಿಯಲ್ಲಿದೆ. ಅರ್ಧದಷ್ಟು ವಿಭಾಗಗಳ ಚಟುವಟಿಕೆಯು ಸದೃಢವಾಗಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಸಾರ್ವಜನಿಕ ವೆಚ್ಚಕ್ಕೆ ₹11.11 ಲಕ್ಷ ಕೋಟಿ ನಿಗದಿಪಡಿಸಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಸಾರ್ವಜನಿಕ ವೆಚ್ಚವು ಶೇ 6.4ರಷ್ಟಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.