ADVERTISEMENT

ಕರ್ನಾಟಕದಲ್ಲಿ 76,422 ಪ್ರಯಾಣಿಕ ವಾಹನ ಮಾರಾಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 13:52 IST
Last Updated 18 ನವೆಂಬರ್ 2025, 13:52 IST
ಪ್ರಯಾಣಿಕ ವಾಹನ
ಪ್ರಯಾಣಿಕ ವಾಹನ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ 10.39 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಪೈಕಿ ದೇಶದ ಪಶ್ಚಿಮ ರಾಜ್ಯಗಳಲ್ಲಿ 3.44 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಮಂಗಳವಾರ ತಿಳಿಸಿದೆ.

ಈ ಒಟ್ಟು ಮಾರಾಟದಲ್ಲಿ ಕರ್ನಾಟಕದಲ್ಲಿ 76,422 ಪ್ರಯಾಣಿಕ ವಾಹನಗಳು ಮಾರಾಟವಾಗಿದೆ. ಇದು ಒಟ್ಟು ಮಾರಾಟದಲ್ಲಿ ಶೇ 7.4ರಷ್ಟಾಗಿದ್ದು, ದೇಶದ ಅತಿಹೆಚ್ಚು ಪ್ರಯಾಣಿಕ ವಾಹನಗಳು ಮಾರಾಟವಾದ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 16,743 ವಾಣಿಜ್ಯ ವಾಹನಗಳು ಮತ್ತು 18,048 ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ದೇಶದಲ್ಲಿ ಅತಿ ಹೆಚ್ಚು ವಾಣಿಜ್ಯ ಮತ್ತು ತ್ರಿಚಕ್ರ ವಾಹನಗಳು ಮಾರಾಟವಾದ ರಾಜ್ಯಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಮಾರಾಟವಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 1,31,822 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಇದು ಒಟ್ಟು ಮಾರಾಟದಲ್ಲಿ ಶೇ 12.7ರಷ್ಟಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ 1,00,481 (ಶೇ 9.7), ಗುಜರಾತ್‌ 87,901 (ಶೇ 8.5) ಮತ್ತು ಕೇರಳದಲ್ಲಿ 69,609 ವಾಹನಗಳು ಮಾರಾಟವಾಗಿದ್ದು, ಶೇ 6.7ರಷ್ಟಿದೆ. 

ಇದೇ ತ್ರೈಮಾಸಿಕದಲ್ಲಿ ಒಟ್ಟು 2.40 ಲಕ್ಷ ವಾಣಿಜ್ಯ ವಾಹನಗಳು ಮಾರಾಟವಾಗಿವೆ. ಮಹಾರಾಷ್ಟ್ರದಲ್ಲಿ 37,091 ವಾಹನಗಳು ಮಾರಾಟವಾಗಿದ್ದು, ಮೊದಲ ಸ್ಥಾನದಲ್ಲಿದೆ. ಬಳಿಕ, ಗುಜರಾತ್‌ 22,491, ಉತ್ತರ ಪ್ರದೇಶ 19,009 ಮತ್ತು ತಮಿಳುನಾಡಿನಲ್ಲಿ 18,508 ವಾಣಿಜ್ಯ ವಾಹನಗಳು ಮಾರಾಟವಾಗಿವೆ. 

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 55.62 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ಇದೇ ವೇಳೆ 2.29 ಲಕ್ಷ ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ಉತ್ತರ ಪ್ರದೇಶದಲ್ಲಿ 28,246, ತೆಲಂಗಾಣದಲ್ಲಿ 26,626, ಗುಜರಾತ್‌ನಲ್ಲಿ 22,572, ಮಹಾರಾಷ್ಟ್ರದಲ್ಲಿ 21,100 ವಾಹನಗಳು ಮಾರಾಟವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.