ADVERTISEMENT

ಅವರ ಬೆದರಿಕೆಯನ್ನೇ ನಾವು ಬಂಡವಾಳ ಮಾಡಿಕೊಂಡರೆ ಹೇಗೆ? ಆನಂದ್ ಮಹೀಂದ್ರಾ ಸಲಹೆಗಳಿವು

ಆಮದಿನ ಮೇಲೆ ಭಾರಿ ಸುಂಕ ವಿಧಿಸಿ ಭಾರತಕ್ಕೆ ವ್ಯಾಪಾರ ಬೆದರಿಕೆ ಹಾಕುತ್ತಿರುವ ಅಮೆರಿಕದ ನಡೆ ಬಗ್ಗೆ ಭಾರತದಲ್ಲಿನ ಅನೇಕ ಉದ್ಯಮಿಗಳು, ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2025, 11:20 IST
Last Updated 7 ಆಗಸ್ಟ್ 2025, 11:20 IST
<div class="paragraphs"><p>ಟಟ್ರಂಪ್, ಆನಂದ್ ಮಹೀಂದ್ರಾ</p></div>

ಟಟ್ರಂಪ್, ಆನಂದ್ ಮಹೀಂದ್ರಾ

   

ಬೆಂಗಳೂರು: ಆಮದಿನ ಮೇಲೆ ಭಾರಿ ಸುಂಕ ವಿಧಿಸಿ ಭಾರತಕ್ಕೆ ವ್ಯಾಪಾರ ಬೆದರಿಕೆ ಹಾಕುತ್ತಿರುವ ಅಮೆರಿಕದ ನಡೆ ಬಗ್ಗೆ ಭಾರತದಲ್ಲಿನ ಅನೇಕ ಉದ್ಯಮಿಗಳು, ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಏತನ್ಮಧ್ಯೆ ಖ್ಯಾತ ಉದ್ಯಮಿ ಹಾಗೂ ‘ಮಹೀಂದ್ರಾ ಗ್ರೂಪ್’ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಮೆರಿಕದ ಅತಿಯಾದ ಸುಂಕದ ಹಾವಳಿಯನ್ನೇ ಅವಕಾಶವನ್ನಾಗಿ ಮಾಡಿಕೊಳ್ಳಲು ಭಾರತಕ್ಕೆ ಈಗ ಸುವರ್ಣಾವಕಾಶ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಆನಂದ್ ಅವರು, ಬಿಕ್ಕಟ್ಟು ಉದ್ಭವವಾಗಿರುವ ಈ ಸನ್ನಿವೇಶದಿಂದ ಹೊರ ಬಂದು ದೇಶವನ್ನು ಆರ್ಥಿಕವಾಗಿ ಬಲಾಡ್ಯವನ್ನಾಗಿ ಮಾಡಲು ಎರಡು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

‘ಭಾರತ ಈಗ ‘‘ಅನೀರಿಕ್ಷಿತ ಪರಿಣಾಮಗಳ ನಿಯಮ’’ವನ್ನು ಬೆನ್ನು ಹತ್ತುವ ಸಮಯ. ಇಂತಹ ಅನೀರಿಕ್ಷಿತ ಸಮಯಗಳಲ್ಲಿ ಯುರೋಪಿಯನ್ ಯೂನಿಯನ್ ಹಾಗೂ ಕೆನಡಾ ತಮ್ಮ ವ್ಯಾಪಾರ ವ್ಯವಹಾರ ನೀತಿಗಳಲ್ಲಿ ಬದಲಾವಣೆ ತಂದು ಸಾಕಷ್ಟು ಸ್ಥಿರತೆಯನ್ನು ಕಂಡುಕೊಂಡಿವೆ. ಭಾರತಕ್ಕೂ ಈಗ ಇಂತಹದೇ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

1991 ರಲ್ಲಿ ವಿದೇಶಿ ವಿನಿಮಯ ಕೊರತೆಯಿಂದ ಜಾಗತಿಕರಣ, ಉದಾರೀಕರಣ, ಖಾಸಗಿಕರಣ ನೀತಿ ಜಾರಿಗೆ ಬಂದು ದೇಶದ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದವು. ಹಾಗೆಯೇ ಈಗ ಬಂದಿರುವ ಸಂಕಟಗಳನ್ನು ಕೊನೆಗಾಣಿಸಲು ದೇಶ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆರ್ಥಿಕ ಸುಧಾರಣೆಗೆ ಕಾರಣವಾಗಬೇಕು ಎಂದು ಎಚ್ಚರಿಸಿದ್ದಾರೆ.

ಆನಂದ ಮಹೀಂದ್ರಾ ನೀಡಿದ 2 ಸಲಹೆಗಳು

1

‘ದೇಶದಲ್ಲಿ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಆದಷ್ಟು ಸರಳಗೊಳಿಸಬೇಕು. ಹೂಡಿಕೆಗೆ ಸಂಬಂಧಿಸಿದಂತೆ ಸದ್ಯ ಒಂದೊಂದು ರಾಜ್ಯಗಳು ಒಂದೊಂದು ನಿಯಮ ಅಳವಡಿಸಿಕೊಂಡು ವ್ಯವಸ್ಥೆಯನ್ನು ಕ್ಲಿಷ್ಟಗೊಳಿಸಿವೆ. ಇದನ್ನು ಪರಿಹರಿಸಿ ಹೂಡಿಕೆಗಾಗಿ ದೇಶದಾದ್ಯಂತ ಏಕಗವಾಕ್ಷಿ (ಸಿಂಗಲ್ ವಿಂಡೋ ವ್ಯವಸ್ಥೆ) ವ್ಯವಸ್ಥೆ ಜಾರಿಗೊಳಿಸಬೇಕು. ಇದರಿಂದ ಸೂಕ್ತ ಅವಕಾಶ, ನಂಬಿಕೆ ಹಾಗೂ ಸುರಕ್ಷಿತ ಸ್ಥಳಕ್ಕಾಗಿ ನೋಡುತ್ತಿರುವ ಅನೇಕ ವಿದೇಶಿ ಹೂಡಿಕೆದಾರರಿಗೆ ಭಾರತ ಹಾಟ್ ಫೇವರಿಟ್ ಆಗುತ್ತದೆ‘

2

‘ಭಾರತದಲ್ಲಿ ಪ್ರವಾಸೋದ್ಯಮವನ್ನು ವಿದೇಶಿ ವಿನಿಮಯ ಹೆಚ್ಚಳದ ಅಕ್ಷಯ ಪಾತ್ರೆ ಎಂಬತೆ ನೋಡುವುದನ್ನು ಮರೆತಿದ್ದಾರೆ. ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಹೊಸ ಆರ್ಥಿಕ ಕ್ರಾಂತಿಯೇ ಆಗಲಿದೆ. ಭಾರತದ ವೀಸಾ ಪ್ರಕ್ರಿಯೆ ಸರಳೀಕರಣ, ಪ್ರವಾಸಿ ಕಾರಿಡಾರ್‌ಗಳ ಅಭಿವೃದ್ಧಿ, ಪ್ರವಾಸಿ ಸ್ಥಳಗಳ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಭದ್ರತೆಯನ್ನು ಗಮನಾರ್ಹವಾಗಿ ಪರಿವರ್ತಿಸಿದರೆ ವಿದೇಶಿ ವಿನಿಮಯ ದೇಶಕ್ಕೆ ಹರಿದು ಬಂದು ಸುಧಾರಣೆ ಕಾಣಲಿದೆ‘

‘ಈ ಎರಡು ಉಪಾಯಗಳನ್ನು ಅಳವಡಿಸಿಕೊಂಡರೆ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆನೆ ಬಲ ಬರಲಿದೆ. ಇದರಿಂದ ಬದಲಾಗುತ್ತಿರುವ ಜಾಗತಿಕ ಆರ್ಥಿಕ ಶಕ್ತಿಕೇಂದ್ರಗಳ ಹಿತಾಸಕ್ತಿಗಳನ್ನು ಮೆಟ್ಟಿನಿಂತು ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬಹುದು. ಬೇರೆಯವರಿಂದ ನಮ್ಮ ದೇಶ ಸುಧಾರಿಸಲಿ ಎಂದು ನಾವು ಕಾಯುವುದು ಬೇಡ, ನಮ್ಮ ಅಭ್ಯುದಯಕ್ಕೆ ನಾವೇ ಕಾರಣವಾಗಬೇಕು’ ಎಂದು ಆನಂದ್ ಮಹೀಂದ್ರಾ ಬಲವಾಗಿ ಪ್ರತಿಪಾದಿಸಿದ್ದಾರೆ.

ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 25 ಸುಂಕ ವಿಧಿಸುತ್ತದೆ ಎಂದು ಟ್ರಂಪ್ ಕಳೆದ ಸೋಮವಾರ ಆದೇಶ ಮಾಡಿದ್ದರು. ಅಷ್ಟರಲ್ಲಿಯೇ ನಿನ್ನೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ (ಒಟ್ಟು ಶೇ50ರಷ್ಟು ಸುಂಕ) ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಈ ಬೆಳವಣಿಗೆಗಳು ಭಾರತಕ್ಕೆ ಆತಂಕ ತರಿಸಿವೆ. ಇದರಿಂದ ಪಾರಾಗುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.