ADVERTISEMENT

ಮಂಗಳೂರು ಸಂಗ್ರಹಾಗಾರದಲ್ಲಿ ಕಾಯ್ದಿಟ್ಟ ತೈಲ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

ಪಿಟಿಐ
Published 21 ಅಕ್ಟೋಬರ್ 2021, 14:14 IST
Last Updated 21 ಅಕ್ಟೋಬರ್ 2021, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಆಗುತ್ತಿರುವ ಹೆಚ್ಚಳದ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು, ತನ್ನ ಸಂಗ್ರಹಾಗಾರಗಳಲ್ಲಿ ಇರುವ ತೈಲವನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳಿಗೆ ಮಾರಲು ಆರಂಭಿಸಿದೆ.

‘ನಾವು ತೈಲ ಮಾರಾಟ ಕಂಪನಿಗಳಿಗೆ ತೈಲವನ್ನು ಮಾರುವ ಕೆಲಸ ಶುರು ಮಾಡಿದ್ದೇವೆ. ಇದರಿಂದ ನಮಗೆ ಮುಂದೆ ಲೀಸ್ ಆಧಾರದಲ್ಲಿ ನೀಡಲು ಸ್ಥಳಾವಕಾಶವೂ ಸಿಗುತ್ತದೆ’ ಎಂದು ಇಂಡಿಯನ್ ಸ್ಟ್ರ್ಯಾಟಜಿಕ್‌ ಪೆಟ್ರೋಲಿಯಂ ರಿಸರ್ವ್ಸ್‌ ಲಿ. (ಐಎಸ್‌ಪಿಆರ್‌ಎಲ್‌) ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಚ್.‍ಪಿ.ಎಸ್. ಅಹುಜಾ ತಿಳಿಸಿದರು.

ಮಂಗಳೂರಿನ ಸಂಗ್ರಹಾಗಾರದಲ್ಲಿ ಇದ್ದ 3 ಲಕ್ಷ ಟನ್ ಕಚ್ಚಾ ತೈಲವನ್ನು ಖಾಲಿ ಮಾಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಮೊದಲು ಇನ್ನುಳಿದ 4.5 ಲಕ್ಷ ಟನ್ ಕಚ್ಚಾ ತೈಲವನ್ನು ಕೂಡ ಮಾರಾಟ ಮಾಡಲಾಗುವುದು ಎಂದರು. ಐಎಸ್‌ಪಿಆರ್‌ಎಲ್‌ ಕಂಪನಿಯು ಮಂಗಳೂರಿನ 7.5 ಲಕ್ಷ ಟನ್ ಸಾಮರ್ಥ್ಯ ಒಂದು ಸಂಗ್ರಹಾಗಾರವನ್ನು ಎಂಆರ್‌ಪಿಎಲ್‌ಗೆ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ.) ಲೀಸ್ ಆಧಾರದಲ್ಲಿ ನೀಡಲಿದೆ. ಮಂಗಳೂರಿನಲ್ಲಿ ತಲಾ 7.5 ಲಕ್ಷ ಟನ್ ಸಾಮರ್ಥ್ಯದ ಎರಡು ಸಂಗ್ರಹಾಗಾರಗಳು ಇವೆ.

ADVERTISEMENT

‘ಸರ್ಕಾರವು ಸಂಗ್ರಹಿಸಿದ್ದ ಕಚ್ಚಾ ತೈಲವನ್ನು ಎಂಆರ್‌ಪಿಎಲ್‌ ಮಾರುಕಟ್ಟೆ ದರ ನೀಡಿ ಖರೀದಿಸಿದೆ. ಮಂಗಳೂರಿನ ಸಂಗ್ರಹಾಗಾರದಲ್ಲಿ ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಎಂಆರ್‌ಪಿಎಲ್ ಸಂಗ್ರಹಿಸಲಿದೆ’ ಎಂದು ವಿವರಿಸಿದರು. ವಿಶಾಖಪಟ್ಟಣದಲ್ಲಿ ಇರುವ ಸಂಗ್ರಹಾಗಾರದಲ್ಲಿನ 1.5 ಲಕ್ಷ ಟನ್ ಕಚ್ಚಾ ತೈಲವನ್ನು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖರೀದಿ ಮಾಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 19 ಡಾಲರ್ ಇದ್ದಾಗ ಕೇಂದ್ರವು ಕಚ್ಚಾ ತೈಲ ಖರೀದಿಸಿತ್ತು. ಈಗ ತೈಲ ಬೆಲೆಯು ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆಯಾಗಿದ್ದು, ಈ ಹಂತದಲ್ಲಿ ತೈಲ ಮಾರಾಟದ ಮೂಲಕ ಅದರ ಲಾಭವನ್ನು ಕೇಂದ್ರವು ಪಡೆದುಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.