ರಾಮನಗರದ ಎಪಿಎಂಸಿಯಲ್ಲಿರುವ ಮಾವು ಮಂಡಿಯಲ್ಲಿ ಮಾರಾಟಕ್ಕೆ ಸಿದ್ದವಾಗಿರುವ ಮಾವಿನಕಾಯಿಗಳು
ರಾಮನಗರ: ಹಣ್ಣುಗಳ ರಾಜ ಎನಿಸಿರುವ ಮಾವಿನಹಣ್ಣಿನ ಋತು ಶುರುವಾಗಿದೆ. ಮಳೆ ಬೀಳುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮಾವಿನ ಕೊಯ್ಲು ಶುರುವಾಗಿದೆ. ವಿವಿಧ ಜಾತಿಯ ಕಾಯಿಗಳು ಇಲ್ಲಿನ ಎಪಿಎಂಸಿಯಲ್ಲಿರುವ ಮಾವು ಮಂಡಿಗಳಿಗೆ ಬರತೊಡಗಿವೆ. ಸದ್ಯದಲ್ಲೇ ಹಣ್ಣುಗಳ ಘಮಲು ಇಡೀ ಮಾರುಕಟ್ಟೆಯನ್ನು ಆವರಿಸಲಿದೆ.
ಬರ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕಳೆದ ಸಲ ಶೇ 90ರಷ್ಟು ಬೆಳೆ ಕೈ ಕೊಟ್ಟಿತ್ತು. ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಲ ಮಳೆ ಜೊತೆಗೆ ಬೆಳೆಯೂ ಚನ್ನಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆ ಮೂಡಿಸಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಬಳಿಕ ಕೋಲಾರ, ಹುಬ್ಬಳ್ಳಿ– ಧಾರವಾಡ ಮಾವು ಮಾರುಕಟ್ಟೆ ಪ್ರವೇಶಿಸುತ್ತವೆ.
ಬಾದಾಮಿ ಹೆಚ್ಚು: ‘ರಾಮನಗರ ಜಿಲ್ಲೆಯ ಬೆಳೆಗಾರರು ಶೇ 90ರಷ್ಟು ಬಾದಾಮಿ ತಳಿಯ ಮಾವು ಬೆಳೆಯುತ್ತಾರೆ. ಉಳಿದ ಶೇ 5ರಷ್ಟು ಸೇಂದೂರ ಬಿಟ್ಟರೆ ರಸಪೂರಿ, ತೋತಾಪುರಿ, ಅಮರಪಾಲಿ, ಮಲ್ಲಿಕಾ ತಳಿಯ ಮಾವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಎಸ್. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ತೋಟಗಾರಿಕಾ ಇಲಾಖೆ ಸಿಬ್ಬಂದಿ ಜಿಲ್ಲೆಯ ಹಲವು ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದು, ಶೇ 70ರಷ್ಟು ಇಳುವರಿ ಚೆನ್ನಾಗಿರುವುದು ಕಂಡು ಬಂದಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಮಾವಿನ ಕಾಯಿಗಳಿಗೆ ಅಷ್ಟಾಗಿ ಹೊಡೆತ ಬಿದ್ದಿಲ್ಲ. ಸದ್ಯ ಮಾರುಕಟ್ಟೆಯ ಕೆಲವೆಡೆ ಸೇಂದೂರ ಹಣ್ಣು ಸಿಗುತ್ತಿವೆ. ಈ ತಿಂಗಳ ಮೂರನೇ ವಾರದಲ್ಲಿ ಬಾದಾಮಿ ಮಾವು ಮಾರುಕಟ್ಟೆ ಪ್ರವೇಶಿಸಲಿದೆ. ಜೂನ್ ಅಂತ್ಯದವರೆಗೆ ಮಾವಿನ ಋತು ಇರಲಿದೆ’ ಎಂದು ಹೇಳಿದರು.
ಮಳೆಗೆ ಉದುರಿದ ಕಾಯಿ: ‘ನೀರಾವರಿ ವ್ಯವಸ್ಥೆ ಮಾವಿನ ತೋಟಗಳಲ್ಲಿ ಫಸಲು ಉತ್ತಮವಾಗಿದ್ದು, ಮಳೆಯಾಶ್ರಿತ ತೋಟಗಳಲ್ಲಿ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ. ಈಗಾಗಲೇ ಸುರಿದ ಮಳೆಗೆ ಸಣ್ಣ ಕಾಯಿಗಳು ಉದುರಿವೆ’ ಎಂದು ಮಾವು ಬೆಳೆಗಾರರಾದ ಶಿವಕುಮಾರ್ ಹಾಗೂ ಕುಮಾರ್ ಹೇಳಿದರು.
‘ಕಾಯಿಗಳು ಮರದಲ್ಲೇ ಹಣ್ಣಾಗಲಿ ಎಂದು ಇನ್ನೂ ಸ್ವಲ್ಪ ದಿನ ಬಿಡಬೇಕು ಎನಿಸುತ್ತದೆ. ಆದರೆ, ಮತ್ತೇನಾದರೂ ಜೋರಾಗಿ ಮಳೆ ಸುರಿದರೆ ಅಥವಾ ಆಲಿಕಲ್ಲು ಮಳೆಯಾದರೆ ಕಾಯಿಗಳು ನೆಲ ಕಚ್ಚಲಿವೆ. ಹಾಗಾಗಿ, ಬಲಿತ ಕಾಯಿಗಳನ್ನು ಕೊಯ್ಲು ಮಾಡಿ ಮಂಡಿಗೆ ತಂದು ಹಾಕುತ್ತಿದ್ದೇವೆ’ ಎಂದು ಅವರು ತಿಳಿಸಿದರು.
ಶೇ 70ರಷ್ಟು ಇಳುವರಿ ನಿರೀಕ್ಷೆ
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಮಾವು ಬೆಳೆ ಉತ್ತಮವಾಗಿದ್ದು ಶೇ 70ರಷ್ಟು ಇಳುವರಿ ನಿರೀಕ್ಷಿಸಲಾಗಿದೆ. ಕೊಯ್ಲು ಶುರುವಾಗಿ ಕಾಯಿಗಳು ಮಂಡಿಗೆ ಬರಲು ಶುರುವಾಗಿದೆ. ಕೆಲವೆಡೆ ಸೇಂದೂರ ಹಣ್ಣು ಸಿಗುತ್ತಿವೆ. ಇನ್ನೂ 20 ದಿನದೊಳಗೆ ಪೂರ್ಣ ಪ್ರಮಾಣದಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರಲಿವೆ. ಕಾಯಿಗಳನ್ನು ಹಣ್ಣು ಮಾಡಲು ಯಾವುದೇ ರಾಸಾಯನಿಕ ಸಿಂಪಡಿಸದೆ ಸ್ವಾಭಾವಿಕವಾಗಿಯೇ ಹಣ್ಣು ಮಾಡಿ ಗ್ರಾಹಕರಿಗೆ ಮಾರಾಟ ಮಾಡುವಂತೆ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಎಸ್. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಹೊರ ರಾಜ್ಯಗಳಿಗೆ ಮಾವು
‘ಜಿಲ್ಲೆಯ ಮಾವು ರಾಜ್ಯದ ವಿವಿಧ ಭಾಗ ಅಲ್ಲದೇ ಮಹಾರಾಷ್ಟ್ರ ಆಂಧ್ರ ಪ್ರದೇಶ ಕೇರಳ ಗುಜರಾತ್‌ಗೆ ಹೋಗುತ್ತದೆ. ಕಾಯಿಗಳ ಕೊಯ್ಲು ಶುರುವಾಗುತ್ತಿದ್ದಂತೆ ಅಲ್ಲಿನ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ. ಹಿಂದೆ ನಾವೇ ತೋಟಗಳನ್ನು ವಹಿಸಿಕೊಂಡು ಕೊಯ್ಲು ಮಾಡುತ್ತಿದ್ದೆವು. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ವ್ಯಾಪಾರಿಗಳು ತೋಟಗಳನ್ನು ವಹಿಸಿಕೊಳ್ಳುವುದು ಕಡಿಮೆಯಾಗಿದೆ. ರೈತರೇ ಕೊಯ್ಲು ಮಾಡಿಕೊಂಡು ತರುತ್ತಾರೆ. ಈ ಸಲ ಕೆಲವೆಡೆ ಉತ್ತಮ ಫಸಲು ಇದ್ದರೆ ಉಳಿದೆಡೆ ಅಷ್ಟಕಷ್ಟೆ ಇದೆ ಎಂದು ರೈತರು ಹೇಳುತ್ತಿದ್ದಾರೆ’ ಎಂದು ರಾಮನಗರದ ಎಪಿಎಂಸಿಯಲ್ಲಿ ನಾಲ್ಕು ದಶಕದಿಂದ ಮಾವು ವ್ಯಾಪಾರ ಮಾಡುತ್ತಿರುವ ಎಚ್.ಎಂ.ಎ ಟ್ರೇಡರ್ಸ್ ಮಾಲೀಕ ಅಂಜುಂ ಪಾಷಾ ‘ಪ್ರಜಾವಾಣಿ’ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.