ADVERTISEMENT

ಏಷ್ಯಾದ ಅತ್ಯಂತ ಸಿರಿವಂತ ಹೆಗ್ಗಳಿಕೆಗೆ ಎರವಾದ ಮುಕೇಶ್‌

ಏಜೆನ್ಸೀಸ್
Published 11 ಮಾರ್ಚ್ 2020, 2:16 IST
Last Updated 11 ಮಾರ್ಚ್ 2020, 2:16 IST
ಮುಕೇಶ್‌
ಮುಕೇಶ್‌   
""

ನವದೆಹಲಿ: ಜಾಗತಿಕ ಷೇರುಪೇಟೆಗಳಲ್ಲಿ ಸೋಮವಾರ ಉಂಟಾದ ಮಹಾ ಕುಸಿತದ ಫಲವಾಗಿ, ಏಷ್ಯಾದ ಅತ್ಯಂತ ಸಿರಿವಂತ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ (62) ಅವರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 42 ಸಾವಿರ ಕೋಟಿ ಕರಗಿದೆ.

ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಒಂದೇ ದಿನದಲ್ಲಿ ವಿಶ್ವದ 500 ಸಿರಿವಂತರ ₹ 16.69 ಲಕ್ಷ ಕೋಟಿ ಮೊತ್ತದ ಸಂಪತ್ತು ಕರಗಿದೆ. 2016ರಿಂದೀಚೆಗೆ ರೂಢಿಸಿಕೊಂಡು ಬಂದಿರುವ ಸಿರಿವಂತರ ಸಂಪತ್ತಿನ ಸೂಚ್ಯಂಕವು ಇದೇ ಮೊದಲ ಬಾರಿಗೆ ದಿನದ ಗರಿಷ್ಠ ಕುಸಿತ ಕಂಡಿದೆ.

ಷೇರು ಮತ್ತು ತೈಲ ಮಾರುಕಟ್ಟೆಗಳಲ್ಲಿನ ಮಹಾ ಕುಸಿತವು ಉದ್ಯಮಿಗಳ ಪಾಲಿಗೆ ‘ಕಪ್ಪು ಸೋಮವಾರ’ವಾಗಿ ಪರಿಣಮಿಸಿದೆ. ತೈಲ ಕಂಪನಿಗಳ ಷೇರುಗಳಲ್ಲಿ ಕಂಡು ಬಂದ ಭಾರಿ ಮಾರಾಟ ಒತ್ತಡದಿಂದಾಗಿ ಮುಕೇಶ್‌ ಅಂಬಾನಿ ಅವರ ಸಂಪತ್ತಿನ ಮಾರುಕಟ್ಟೆ ಮೌಲ್ಯವು ಈಗ ₹ 2.92 ಲಕ್ಷ ಕೋಟಿಗೆ ಇಳಿದಿದೆ.

ADVERTISEMENT

ರಿಲಯನ್ಸ್‌ ಆರ್ಥಿಕ ಒಕ್ಕೂಟದ ತೈಲ ಮತ್ತು ಪೆಟ್ರೊಕೆಮಿಕಲ್ಸ್ ವಹಿವಾಟಿನ ಕೆಲ ಪಾಲನ್ನು ಸೌದಿ ಅರೇಬಿಯಾದ ಆರಾಮ್ಕೊಗೆ ಮಾರಾಟ ಮಾಡಿ ಸಾಲದ ಹೊರೆ ತಗ್ಗಿಸುವ ಮುಕೇಶ್‌ ಅವರ ಚಿಂತನೆ ಕಾರ್ಯರೂಪಕ್ಕೆ ಬರುವ ಬಗ್ಗೆ ಈಗ ಅನುಮಾನಗಳು ಮೂಡಿವೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ದೇಶದಲ್ಲಿ ನಡೆದ ದೂರಸಂಪರ್ಕ ಕ್ರಾಂತಿಯ ಫಲವಾಗಿ ಅಂಬಾನಿ ಅವರ ಸಂಪತ್ತು ಗಣನೀಯವಾಗಿ ಏರಿಕೆ ದಾಖಲಿಸಿತ್ತು.

ಮೊದಲ ಸ್ಥಾನಕ್ಕೆ ಜಾಕ್‌ ಮಾ: ಚೀನಾದ ಅಲಿಬಾಬಾ ಕಂಪನಿ ಸ್ಥಾಪಕರಾಗಿರುವ ಉದ್ಯಮಿ ಜಾಕ್‌ ಮಾ (55) ಅವರ ಸಂಪತ್ತು ₹ 7,700 ಕೋಟಿಗಳಷ್ಟು ಕರಗಿದೆ. 2018ರಲ್ಲಿ ಏಷ್ಯಾದ ಕುಬೇರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಎರವಾಗಿದ್ದ ಜಾಕ್‌, ಈಗ ಮತ್ತೆ ಆ ಸ್ಥಾನಕ್ಕೆ ಏರಿದ್ದಾರೆ.

ಜಾಗತಿಕ ಷೇರುಪೇಟೆಗಳಲ್ಲಿನ ಷೇರುಗಳ ಮಾರಾಟ ಒತ್ತಡವು ವಿಶ್ವದ ಇತರ ಸಿರಿವಂತರ ಸಂಪತ್ತನ್ನೂ ದೊಡ್ಡ ಪ್ರಮಾಣದಲ್ಲಿ ಕರಗಿಸಿದೆ. ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಅಮೆಜಾನ್‌ ಸ್ಥಾಪಕರಾಗಿರುವ ಮತ್ತು ವಿಶ್ವದ ಅತಿ ದೊಡ್ಡ ಸಿರಿವಂತ ಜೆಫ್‌ ಬಿಜೊಸ್‌ ₹ 39,200 ಕೋಟಿ ಮತ್ತು ಬರ್ಕ್‌ಷೈರ್‌ ಹ್ಯಾತ್‌ವೇದ ವಾರನ್‌ ಬಫೆಟ್‌ ₹ 37,100 ಕೋಟಿ ಮೊತ್ತದ ಸಂಪತ್ತು ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.