ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌ 371, ನಿಫ್ಟಿ 123 ಅಂಶ ಏರಿಕೆ

ಪಿಟಿಐ
Published 28 ಡಿಸೆಂಬರ್ 2023, 15:57 IST
Last Updated 28 ಡಿಸೆಂಬರ್ 2023, 15:57 IST
   

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, ಸಾರ್ವಕಾಲಿಕ ಮಟ್ಟದಲ್ಲಿ ಗುರುವಾರ ವಹಿವಾಟನ್ನು ಅಂತ್ಯಗೊಳಿಸಿವೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆ, ವಿದೇಶಿ ಹಣದ ಒಳಹರಿವು ಹೆಚ್ಚಳ ಸೇರಿದಂತೆ ಜಾಗತಿಕ ಮಟ್ಟದಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಷೇರುಪೇಟೆಯಲ್ಲಿ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಇಂಧನ, ಲೋಹ ಹಾಗೂ ಎಫ್‌ಎಂಸಿಜಿ ಗಳಿಕೆಯು ಸೂಚ್ಯಂಕಗಳ ಏರಿಕೆಗೆ ಮುನ್ನುಡಿ ಬರೆದವು. 

ADVERTISEMENT

ಸೆನ್ಸೆಕ್ಸ್‌ 371 ಅಂಶ ಏರಿಕೆ ಕಂಡು ಸಾರ್ವಕಾಲಿಕ ಮಟ್ಟವಾದ 72,410ಕ್ಕೆ ತಲುಪಿತು. ದಿನದ ಆರಂಭಿಕ ವಹಿವಾಟಿನಲ್ಲಿ 445 ಅಂಶ ಏರಿಕೆ ಕಂಡು, 72,484 ಅಂಶಕ್ಕೆ ಮುಟ್ಟಿತ್ತು.

ನಿಫ್ಟಿ 123 ಅಂಶ ಹೆಚ್ಚಾಗಿ 21,778 ಅಂಶಗಳಲ್ಲಿ ಸಾರ್ವಕಾಲಿಕ ಮಟ್ಟ ದಾಖಲಿಸಿತು. ಸತತ ಐದು ದಿನಗಳ ಏರಿಕೆಯ ಅಂತರದಲ್ಲಿ ಸೆನ್ಸೆಕ್ಸ್ 1,904 ಅಂಶ (ಶೇ 2.70) ಏರಿಕೆಯಾಗಿದ್ದರೆ, ನಿಫ್ಟಿ 628 ಅಂಶ ಏರಿಕೆ (ಶೇ 2.97) ಕಂಡಿದೆ.

ರೂಪಾಯಿ ಏರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿನ ಗುರುವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಹೆಚ್ಚಾಗಿದೆ. ಪ್ರತಿ ಒಂದು ಡಾಲರ್‌ಗೆ ₹83.20ರಂತೆ ವಿನಿಮಯಗೊಂಡಿತು. 

ಕಳೆದ ಎರಡು ದಿನಗಳಿಂದ ರೂಪಾಯಿ ಮೌಲ್ಯ ಕುಸಿದಿತ್ತು. 

ವಿದೇಶಿ ಹೂಡಿಕೆಯ ಒಳಹರಿವು ಹೆಚ್ಚಳ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯು ರೂಪಾಯಿ ಚೇತರಿಕೆಗೆ ನೆರವಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ವಿಶ್ಲೇಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.