ADVERTISEMENT

ಹೊಸ ವರ್ಷದ ಮೊದಲ ವಹಿವಾಟು: ಸೆನ್ಸೆಕ್ಸ್‌ 929 ಅಂಶ ಜಿಗಿತ

ಬ್ಯಾಂಕಿಂಗ್‌, ಹಣಕಾಸು ಮತ್ತು ಐ.ಟಿ. ಷೇರುಗಳಲ್ಲಿ ಖರೀದಿ ಭರಾಟೆ

ಪಿಟಿಐ
Published 3 ಜನವರಿ 2022, 13:54 IST
Last Updated 3 ಜನವರಿ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹೊಸ ವರ್ಷದ ಮೊದಲ ವಹಿವಾಟಿನ ದಿನವೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 929 ಅಂಶಗಳಷ್ಟು ಜಿಗಿತ ಕಂಡಿದೆ. ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೂ ಬ್ಯಾಂಕಿಂಗ್‌, ಹಣಕಾಸು ಮತ್ತು ಐ.ಟಿ. ಷೇರುಗಳ ಖರೀದಿ ಭರಾಟೆಯುಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಉತ್ತೇಜನ ನೀಡಿತು.

ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿಯ ಜೊತೆಗೆ ಆರ್ಥಿಕ ಬೆಳವಣಿಗೆಯನ್ನು ಸೂಚಿಸುವ ಕೆಲವು ಅಂಶಗಳು ಸಹ ವಹಿವಾಟು ಹೆಚ್ಚಳಕ್ಕೆ ಕಾರಣವಾದವು ಎಂದು ವರ್ತಕರು ಹೇಳಿದ್ದಾರೆ.

ಉತ್ತಮ ಆರಂಭ ಕಂಡ ಬಿಎಸ್‌ಇ ಸೆನ್ಸೆಕ್ಸ್‌, ದಿನದ ಗರಿಷ್ಠ ಮಟ್ಟವಾದ 59,266 ಅಂಶಗಳಿಗೆ ತಲುಪಿತ್ತು. ವಹಿವಾಟಿನ ಅಂತ್ಯದ ವೇಳೆಗೆ 929 ಅಂಶಗಳಷ್ಟು ಏರಿಕೆಯೊಂದಿಗೆ 59,183 ಅಂಶಗಳಲ್ಲಿ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 271 ಅಂಶ ಹೆಚ್ಚಾಗಿ 17,625 ಅಂಶಗಳಿಗೆ ಏರಿಕೆ ಕಂಡಿತು.

ADVERTISEMENT

ಬಜಾಜ್‌ ಫೈನಾನ್ಸ್‌ ಕಂಪನಿಯ ಷೇರು ಶೇ 3.52ರಷ್ಟು ಏರಿಕೆ ಆಗಿದೆ. ಬಜಾಜ್‌ ಫಿನ್‌ಸರ್ವ್‌, ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಷೇರುಗಳು ಸಹ ಗಳಿಕೆ ಕಂಡವು.

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಬೆಳವಣಿಗೆ ಜೊತೆಗೆ ಬ್ಯಾಂಕಿಂಗ್‌, ವಾಹನ ಮತ್ತು ಐ.ಟಿ. ಷೇರುಗಳ ಗಳಿಕೆಯಿಂದಾಗಿ ದೇಶಿ ಷೇರುಪೇಟೆಗಳು ಹೊಸ ವರ್ಷವನ್ನು ಏರಿಕೆಯೊಂದಿಗೆ ಆರಂಭಿಸಿದವು. ಸೆಮಿಕಂಡಕ್ಟರ್‌ ಕೊರತೆಯ ಕಾರಣಕ್ಕಾಗಿ ವಾಹನೋದ್ಯಮವು ಡಿಸೆಂಬರ್‌ನಲ್ಲಿ ಮಿಶ್ರಫಲ ಅನುಭವಿಸಿದೆ. ಇದರಿಂದಾಗಿ ದಿನದ ವಹಿವಾಟಿನಲ್ಲಿ ವಾಹನ ಕಂಪನಿಗಳ ಷೇರುಗಳು ಹೆಚ್ಚು ಗಮನ ಸೆಳೆದವು ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ದೇಶದ ತಯಾರಿಕಾ ವಲಯದ ಡಿಸೆಂಬರ್‌ ತಿಂಗಳ ಚಟುವಟಿಕೆಯು ನವೆಂಬರ್‌ಗಿಂತಲೂ ಕಡಿಮೆ ಇದ್ದರೂ, ತಯಾರಿಕೆ ಮತ್ತು ಹೊಸ ಯೋಜನೆಗಳಲ್ಲಿ ಉತ್ತಮ ಬೆಳವಣಿಗೆಯನ್ನು ಸೂಚಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ವಲಯಗಳಲ್ಲಿಯೂ ಸ್ಮಾಲ್‌ ಮತ್ತು ಮಿಡ್‌ಕ್ಯಾಪ್‌ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿವೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್‌. ರಂಗನಾಥನ್‌ ಹೇಳಿದ್ದಾರೆ.‌ ಬಿಎಸ್‌ಇನಲ್ಲಿ ಆರೋಗ್ಯ ಸೇವಾ ವಲಯವನ್ನು ಹೊರತುಪಡಿಸಿ ಉಳಿದೆಲ್ಲ ವಲಯಗಳ ಸೂಚ್ಯಂಕಗಳು ಸಕಾರಾತ್ಮಕ ಗಳಿಕೆ ಕಂಡಿವೆ. ಬಿಎಸ್‌ಇ ಲಾರ್ಜ್, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್ ಸೂಚ್ಯಂಕಗಳು ಶೇ 1.48ರಷ್ಟು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯ ಅಲ್ಪ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಕೇವಲ 1 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.28ರಂತೆ ವಿನಿಮಯಗೊಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 1.25ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 78.75 ಡಾಲರ್‌ಗಳಿಗೆ ತಲುಪಿತು.

ಹೂಡಿಕೆದಾರರ ಸಂಪತ್ತು ವೃದ್ಧಿ: ಷೇರುಪೇಟೆಯಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ಒಂದೇ ದಿನದಲ್ಲಿ ₹ 3.49 ಲಕ್ಷ ಕೋಟಿಯಷ್ಟು ಏರಿಕೆ ಆಗಿದೆ. ಇದರಿಂದಾಗಿ ಬಿಎಸ್‌ಇ ಷೇರು ಮೌಲ್ಯವು ₹ 269.49 ಲಕ್ಷ ಕೋಟಿಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.